ಆಪಾದಿತ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಇಂದು (ಮೇ 10) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸಂಜೆಯೊಳಗೆ ವಿವರವಾದ ಆದೇಶವನ್ನು ಅಪ್ಲೋಡ್ ಮಾಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಹೇಳಿದೆ.
ಅಬಕಾರಿ ನೀತಿ ಹಗರಣ ಸಂಬಂಧ ಆಗಸ್ಟ್ 2022ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಕೇಜ್ರಿವಾಲ್ ಅವರನ್ನು ಸುಮಾರು ಒಂದೂವರೆ ವರ್ಷಗಳ ನಂತರ 21 ಮಾರ್ಚ್ 2024 ರಲ್ಲಿ ಬಂಧಿಸಿರುವುದನ್ನು ಪೀಠ ಗಮನಿಸಿದೆ.
ಚುನಾಯಿತ ಮುಖ್ಯಮಂತ್ರಿಯ ಪ್ರಕರಣದ ವಿಚಾರಣೆ ನಡೆಯುತ್ತಿದೆ, ಸಾಮಾನ್ಯ ವ್ಯಕ್ತಿಯದ್ದಲ್ಲ. ಸಾರ್ವತ್ರಿಕ ಚುನಾವಣೆ 5 ವರ್ಷಗಳಿಗೊಮ್ಮೆ ನಡೆಯುತ್ತದೆ ಎಂಬ ಅಂಶಗಳನ್ನೂ ಪೀಠ ಗಮನಿಸಿದೆ. ಮೇ 7ರಂದು ವಿಚಾರಣೆ ನಡೆಸಿದ್ದ ಪೀಠ, ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ದೊರೆತರೂ, ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಅನುಮತಿಸುವುದಿಲ್ಲ ಎಂದು ಮೌಖಿಕವಾಗಿ ಹೇಳಿತ್ತು.
ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವುದನ್ನು ವಿರೋಧಿಸಿ ಇಡಿ ನಿನ್ನೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಇಂದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಖಲಿಸ್ತಾನಿ ಚಟುವಟಿಕೆಗಳ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿರುವ ಅಮೃತ್ ಪಾಲ್ ಸಿಂಗ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಜಾಮೀನಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂದು ತಿಳಿಸಿದರು. ಚುನಾವಣೆ ಹಿನ್ನೆಲೆ ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡುವುದು ಭಾರೀ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖನ್ನಾ ಅವರು, ಅಮೃತ ಪಾಲ್ ಸಿಂಗ್ ಮತ್ತು ಕೇಜ್ರಿವಾಲ್ ಅವರದ್ದು ಪ್ರತ್ಯೇಕ ಪ್ರಕರಣಗಳು ಎಂದರು. ಈ ವೇಳೆ ಮತ್ತೆ ವಾದ ಮಂಡಿಸಿದ ತುಷಾರ್ ಮೆಹ್ತಾ, ಕೇಜ್ರಿವಾಲ್ ಲೋಕಸಭೆ ಚುನಾವಣೆಯ ಅಭ್ಯರ್ಥಿ ಅಲ್ಲ. ಬಂಧಿತ ವ್ಯಕ್ತಿ ಅಭ್ಯರ್ಥಿ ಅಲ್ಲದಿರುವಾಗ ಅವರನ್ನು ಪ್ರಚಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಸಲುವಾಗಿ ಬಿಡುಗಡೆ ಮಾಡಿದ ನಿದರ್ಶನಗಳಿಲ್ಲ ಎಂದು ಹೇಳಿದರು.
ಕೊನೆಯದಾಗಿ, ಇಡಿ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ಮುಂದಿನ ವಾರ ಮುಕ್ತಾಯಗೊಳಿಸಲಾಗುವುದು ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಲು ಕೇಜ್ರಿವಾಲ್ ಅವರಿಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಜೂನ್ 2ರಂದು ಜೈಲಿಗೆ ಶರಣಾಗಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರಿದ್ದ ಪೀಠ ಸೂಚಿಸಿದೆ.
ಇದನ್ನೂ ಓದಿ : ದಾಭೋಲ್ಕರ್ ಪ್ರಕರಣ: ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ ಗೌರಿ ಲಂಕೇಶ್ ಹತ್ಯೆಯಲ್ಲೂ ಆರೋಪಿ


