ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮತ್ತು ವಕೀಲ ಜಿ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ.
ಪೆನ್ ಡ್ರೈವ್‌ನಲ್ಲಿದ್ದ ಸ್ಪಷ್ಟ ವೀಡಿಯೊವನ್ನು ಸೋರಿಕೆ ಮಾಡಿದ ಆರೋಪ ಮತ್ತು ಮಹಿಳೆಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ದೇವರಾಜೇಗೌಡನನ್ನು ಬಂಧಿಸಲಾಗಿದೆ. ಹಿರಿಯೂರು ತಾಲ್ಲೂಕಿನ ಕೆಆರ್ ಹಳ್ಳಿ ಗೇಟ್ ಬಳಿ ಇನೋವಾ ಕಾರಿನಲ್ಲಿ ಬರುತ್ತಿದ್ದಾಗ ಶುಕ್ರವಾರ ರಾತ್ರಿ ಹಿರಿಯೂರು ಗ್ರಾಮಾಂತರ ಪೊಲೀಸರು ದೇವರಾಜೇಗೌಡನನ್ನು ಬಂಧಿಸಿದ್ದಾರೆ.
ದೇವರಾಜೇಗೌಡ ನಿವೇಶನವನ್ನು ಮಾರಾಟ ಮಾಡಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಎ.1ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಆತನ ವಿರುದ್ಧವು ಪ್ರಕರಣ ದಾಖಲಾಗಿತ್ತು.
ದೇವರಾಜೇಗೌಡ ಯಾರು?
ಬಿಜೆಪಿ ನಾಯಕ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕಳೆದ ವರ್ಷ ಬಿಜೆಪಿ ನಾಯಕರಿಗೆ ಎಚ್ಚರಿಸಿದ್ದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಪ್ರಭಾವ ಬೀರುವ ಸಾಧ್ಯತೆ ಬಗ್ಗೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ, ಗೌಡರು ತಮಗೆ ವಿಡಿಯೊಗಳ ಕುರಿತ ಪತ್ರವನ್ನು ಕಳುಹಿಸಿದ್ದಾರೆ ಎಂಬುದಾಗಿ ಹೇಳಿರುವುದು ಸುಳ್ಳು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ಅವರ ತಂದೆ ಹೊಳೆನರಸೀಪುರ ಶಾಸಕ ಎಚ್‌ಡಿ ರೇವಣ್ಣ ವಿರುದ್ಧ ಗೌಡರು ಸ್ಪರ್ಧಿಸಿದ್ದರು.
ದೇವರಾಜೇಗೌಡ ಮೇಲೆ ದೌರ್ಜನ್ಯ ಪ್ರಕರಣ:
ದೇವರಾಜೇಗೌಡ ಮತ್ತು ಇತರರು ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಹಾಸನದ ಹೊಳೆನರಸೀಪುರ ಪಟ್ಟಣದಲ್ಲಿ ಎಫ್‌ಐಆರ್ ದಾಖಲಾಗಿದೆ.
ಗೌಡರ ವಿರುದ್ಧ ಐಪಿಸಿಯ ಸೆಕ್ಷನ್ 354 (ಎ), 354 ಸಿ, 448, 504, 506, 34 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2008ರ 66 (ಇ) ಅಡಿಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಸೇರಿದಂತೆ ವಿವಿಧ ಸೆಕ್ಸನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ದೇವರಾಜೇಗೌಡ ಅವರನ್ನು ಹೊರತುಪಡಿಸಿ ಇತರ ಮೂವರನ್ನು ಹೆಸರಿಸಲಾಗಿತ್ತು.
ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಆತನ ವಿರುದ್ಧ ಅತ್ಯಾಚಾರ, ಕಿರುಕುಳ, ಬೆದರಿಕೆ ಕುರಿತಂತೆ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದೇನೆ, ಆತನ ಪತ್ತೆಗೆ ಎಸ್‌ಐಟಿ ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡಿದೆ. ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣದ ಸಂತ್ರಸ್ತೆ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದು, ಸಧ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನು ಓದಿ: ಛತ್ತೀಸ್‌ಗಢ: ಭದ್ರತಾ ಪಡೆಗಳಿಂದ ಜಂಟಿ ಕಾರ್ಯಾಚರಣೆ; 12 ಮಾವೋವಾದಿಗಳ ಹತ್ಯೆ


