ಲೋಕಸಭೆ ಚುನಾವಣೆಯಲ್ಲಿ ಅವ್ಯವಸ್ಥೆಗಳು ನಡೆಯುತ್ತಿದ್ದರೂ ಕಂಡು ಕಾಣದಂತೆ ಮೌನವಾಗಿರುವ ಭಾರತೀಯ ಚುನಾವಣಾ ಆಯೋಗದ ವಿರುದ್ದ ನಾಗರಿಕ ಸಂಘಟನೆಗಳು ದೇಶದ ಹಲವೆಡೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿವೆ.
‘ಬೆನ್ನು ಮೂಳೆ ನೆಟ್ಟಗೆ ಮಾಡಿಕೊಳ್ಳಿ, ಇಲ್ಲವೇ ರಾಜೀನಾಮೆ ನೀಡಿ’ (GrowASpineOrResign) ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರು, ಮೈಸೂರು, ಹೈದರಾಬಾದ್, ಅಹಮದಾಬಾದ್, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ನಾಗರಿಕ, ಜನಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
— Bahutva Karnataka ಬಹುತ್ವ ಕರ್ನಾಟಕ (@BahutvaKtka) May 9, 2024
ಅಲ್ಲದೆ, ಸಾವಿರಾರು ಮಂದಿ ಬೆನ್ನುಮೂಲೆಯ ಚಿತ್ರಹೊಂದಿರುವ ಅಂಚೆ ಪತ್ರದಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಅದರ ಜವಾಬ್ದಾರಿಯನ್ನು ನೆನಪಿಸಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರ ಕಚೇರಿ ಮುಂದೆ ವಿವಿಧ ಸಂಘಟನೆಗಳ ಸದಸ್ಯರು ಸಂವಿಧಾನದ ಪ್ರತಿ, ಅಂಚೆ ಪತ್ರ ಮತ್ತು ಬೆನ್ನುಮೂಲೆಯ ಚಿತ್ರವಿರುವ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ, 1. ಚುನಾವಣಾ ಪ್ರಚಾರದ ವೇಳೆ ಪದೇ ಪದೇ ದ್ವೇಷ ಭಾಷಣ ಮಾಡುತ್ತಿರುವ ಬಿಜೆಪಿ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಚಾರದಿಂದ 96 ಗಂಟೆಗಳ ಕಾಲ ನಿಷೇಧ ಮಾಡಬೇಕು.
2. ಸೂರತ್, ಗಾಂಧಿನಗರ ಮತ್ತು ಇಂದೋರ್ ಸೇರಿದಂತೆ ವಿವಿದೆಡೆಗಳಲ್ಲಿ ಅಭ್ಯರ್ಥಿಗಳಿಗೆ ಆಮಿಷವೊಡ್ಡಿ ಅಥವಾ ಒತ್ತಡ ಹೇರಿ ನಾಮಪತ್ರಗಳನ್ನು ಹಿಂತೆಗಿಸಿದ ಬಗ್ಗೆ ತನಿಖೆ ನಡೆಸಬೇಕು.

3.ಈಗಾಗಲೇ ನಡೆದಿರುವ ಮೂರು ಹಂತಗಳ ಮತದಾನದಲ್ಲಿ ಮತ ಚಲಾಯಿಸಿದ ಮತದಾರರ ಸಂಖ್ಯೆಯನ್ನು ತಕ್ಷಣ ಪ್ರಕಟಿಸಬೇಕು.
4. 2019ರಲ್ಲಿ ಚಲಾವಣೆಯಾದ ಮತ್ತು ಎಣಿಕೆಯಾದ ಮತಗಳಲ್ಲಿನ ವ್ಯತ್ಯಾಸಗಳ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಬೇಕು.

5. ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ವಿವಿಧ ಪಕ್ಷಗಳ ವಿರುದ್ದ ಕ್ರಮ ಕೈಗೊಂಡಿರುವುದನ್ನು ತಿಳಿಸಬೇಕು.
6. ರಾಜಕೀಯ ಪಕ್ಷಗಳ ಬಾಡಿಗೆ ಜಾಹೀರಾತುಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ : ಜನರನ್ನು ತಪ್ಪುದಾರಿಗೆಳೆಯಲು ಮೋದಿ ಸುಳ್ಳುಗಳನ್ನು ಹರಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ


