ಮೋದಿ ಸರ್ಕಾರವನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸದಿದ್ದರೆ ದೇಶವು “ಕರಾಳ ದಿನಗಳನ್ನು” ನೋಡಲಿದೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನಾ ಪಕ್ಷದ ಮುಖವಾಣಿ ‘ಸಾಮ್ನಾ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಭಾರತದ ಜನರು ತಮ್ಮ ನಾಯಕರ ಭವಿಷ್ಯವನ್ನು ನಿರ್ಧರಿಸುತ್ತಾರೆ. ಪ್ರಸ್ತುತ ಸರ್ಕಾರವನ್ನು ಸೋಲಿಸಿದರೆ ದೇಶದ ಭವಿಷ್ಯವು ಶಾಂತಿಯುತವಾಗಿರುತ್ತದೆ ಮತ್ತು ಪ್ರಜಾಪ್ರಭುತ್ವವು ಬಲವಾಗುತ್ತದೆ. ಇಲ್ಲದಿದ್ದರೆ ದೇಶವು ಕರಾಳ ದಿನಗಳನ್ನು ನೋಡಲಿದೆ. ಅಚ್ಛೇ ದಿನ್ ಎಂದಿಗೂ ಬರಲಿಲ್ಲ, ಆದರೆ ಕರಾಳ ದಿನಗಳು ಬರುತ್ತವೆ ಎಂದು ಹೇಳಿದ್ದಾರೆ.
ಭ್ರಷ್ಟರ ರಕ್ಷಣೆ ಮೋದಿ ಗ್ಯಾರಂಟಿ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಎಲ್ಲಾ ಧೂಳು ಮತ್ತು ಮಣ್ಣನ್ನು ಹೀರುವ ವ್ಯಾಕ್ಯೂಮ್ ಕ್ಲೀನರ್‌ನಂತೆ ಬಿಜೆಪಿ ಎಲ್ಲಾ ಭ್ರಷ್ಟರನ್ನು ಸೇರಿಸುತ್ತಿದೆ. ಕಾಂಗ್ರೆಸ್, ಶಿವಸೇನೆ ಭ್ರಷ್ಟರಿಂದ ಮುಕ್ತವಾಗಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ಬಿಜೆಪಿಗೆ ಹೇಳಿಕೊಳ್ಳುವ ಸಾಧನೆ ಏನೂ ಇಲ್ಲ, ಆದ್ದರಿಂದ ಚುನಾವಣಾ ಭಾಷಣದಲ್ಲಿ ಬಿಜೆಪಿ ರಾಮನ ಹೆಸರು ಹೇಳುತ್ತಿದೆ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳ ಬಗ್ಗೆ ಕೇಳಿದ ಪ್ರಶ್ನೆಗೆ ಠಾಕ್ರೆ, ಪ್ರಧಾನಿ ತಮ್ಮ ಭಾಷಣಗಳಲ್ಲಿ ಪಾಕಿಸ್ತಾನ ಬಗ್ಗೆ ಮಾತನಾಡುತ್ತಾರೆ, ಆದರೆ ಪ್ರತಿಪಕ್ಷಗಳು ಭಾರತದ ಬಗ್ಗೆ ಮಾತನಾಡುತ್ತವೆ ಎಂದು ಹೇಳಿದ್ದಾರೆ.
ಎನ್‌ಸಿಪಿ(ಎಸ್‌ಪಿ) ನಾಯಕ ಶರದ್ ಪವಾರ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಟೀಕೆಗಳನ್ನು ಸಹಿಸುವುದಿಲ್ಲ ಆದರೆ ಇತರರ ವಿರುದ್ಧ ಏನೇನೋ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಣೆ ವೇಳೆ ಮಾತನಾಡಿದ್ದ ಶರದ್ ಪವಾರ್, ಮೋದಿ ಅವರು ಮುಸ್ಲಿಮರನ್ನು ಬಹಿರಂಗವಾಗಿ ಗುರಿಯಾಗಿಸಿದ್ದಾರೆ, ಆದರೆ ಅವರು ಪ್ರಧಾನಿಯಾಗಿದ್ದರೂ ಅವರು ಎಲ್ಲಾ ಜಾತಿಗಳು ಮತ್ತು ಧರ್ಮಗಳ ನಾಗರಿಕರ ಪರವಾಗಿ ನಿಲ್ಲಬೇಕು ಎಂದು ಹೇಳಿದ್ದರು.
ಮೋದಿ ಮಹಿಳಾ ವಿರೋಧಿ ಮತ್ತು ರೈತ ವಿರೋಧಿಯಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ರೈತರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ಏನನ್ನೂ ಮಾಡಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆಯೂ ಅವರ ಸರ್ಕಾರ ಕಣ್ಣು ಮುಚ್ಚಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೋರೆನ್ ಅವರ ಬಂಧನವು ಅಧಿಕಾರದ ದುರುಪಯೋಗ ಮತ್ತು ದುರಹಂಕಾರಕ್ಕೆ ಉದಾಹರಣೆಯಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಇದನ್ನು ಓದಿ; ಮೋದಿ ವಿರುದ್ಧ ಸ್ಪರ್ಧೆ: ವಾರಣಾಸಿಯಲ್ಲಿ ಅಧಿಕಾರಿಗಳು ನಾಮಪತ್ರದ ಅರ್ಜಿಯೇ ಕೊಡುತ್ತಿಲ್ಲ; ಶ್ಯಾಮ್ ರಂಗೀಲಾ ಆರೋಪ


