ಹರಿಯಾಣದಲ್ಲಿ ಮೂವರು ಸ್ವತಂತ್ರ ಶಾಸಕರು ಆಡಳಿತಾರೂಢ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದು ಕಾಂಗ್ರೆಸ್‌ಗೆ ಸೇರಿದ ಕೆಲವೇ ದಿನಗಳಲ್ಲಿ, ಕುರುಕ್ಷೇತ್ರದಿಂದ ಎರಡು ಅವಧಿಗೆ ಸಂಸದೆಯಾಗಿದ್ದ ಕೈಲಾಶೋ ಸೈನಿ ಅವರು ಕೇಸರಿ ಪಕ್ಷವನ್ನು ತೊರೆದು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಸಮ್ಮುಖದಲ್ಲಿ ಕೈ ಹಿಡಿದಿದ್ದಾರೆ.
ಕೈಲಾಶೋ ಅವರನ್ನು ಕುರುಕ್ಷೇತ್ರ ಜಿಲ್ಲೆಯ ಪ್ರಮುಖ ಒಬಿಸಿ ನಾಯಕಿ ಎಂದು ಪರಿಗಣಿಸಲಾಗಿದೆ. ಮೇ 25 ರ ಲೋಕಸಭೆ ಚುನಾವಣೆಯಲ್ಲಿ ಕುರುಕ್ಷೇತ್ರದಲ್ಲಿ ಇಂಡಿಯಾ ಬ್ಲಾಕ್ ಬೆಂಬಲಿತ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಶೀಲ್ ಗುಪ್ತಾ ಪರವಾಗಿ ಪ್ರಚಾರ ಮಾಡುವುದಾಗಿ ಅವರು ಘೋಷಿಸಿದರು.
ಅವರು 1998 ಮತ್ತು 1999 ರಲ್ಲಿ ಕುರುಕ್ಷೇತ್ರ ಲೋಕಸಭಾ ಸ್ಥಾನದಿಂದ ಕ್ರಮವಾಗಿ ಹರಿಯಾಣ ಲೋಕದಳ (ರಾಷ್ಟ್ರೀಯ) ಮತ್ತು ಭಾರತೀಯ ರಾಷ್ಟ್ರೀಯ ಲೋಕದಳದ ಟಿಕೆಟ್‌ಗಳಲ್ಲಿ ಆಯ್ಕೆಯಾದರು. ಐಎನ್‌ಡಿಎಲ್ ಅನ್ನು ಮೊದಲು ಹರಿಯಾಣ ಲೋಕದಳ (ರಾಷ್ಟ್ರೀಯ) ಎಂದು ಕರೆಯಲಾಗುತ್ತಿತ್ತು.
ಕಾಂಗ್ರೆಸ್‌ಗೆ ಸೇರ್ಪಡೆಯಾದ ನಂತರ ಕೈಲಾಶೋ ಮಾತನಾಡಿ, “ರಾಜ್ಯದಲ್ಲಿ 10 ವರ್ಷಗಳ ಆಡಳಿತದಲ್ಲಿ ಸಮಾಜದ ಪ್ರತಿಯೊಂದು ವರ್ಗವನ್ನು ಗೌರವಿಸಿದ ಭೂಪಿಂದರ್ ಸಿಂಗ್ ಹೂಡಾ ಅವರ ನೇತೃತ್ವದಲ್ಲಿ ನಾನು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದೇನೆ. ನಾನು ಬಹಳ ಸಮಯದಿಂದ ಯೋಚಿಸಿದ್ದೆ, ಕಾಂಗ್ರೆಸ್‌ನಂತಹ ಪ್ರಜಾಸತ್ತಾತ್ಮಕ ಪಕ್ಷ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ” ಎಂದರು.
ಪಕ್ಷ ತೊರೆಯಲು ಕಾರಣ ಹೇಳಿದ ಮಾಜಿ ಸಂಸದೆ, “ಬಿಜೆಪಿಯಲ್ಲಿ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲ; ಸಂವಿಧಾನ ಬದಲಿಸುವ ಷಡ್ಯಂತ್ರ ನಡೆಯುತ್ತಿದೆ. ರೈತರನ್ನು ದೊಣ್ಣೆಗಳಿಂದ ಥಳಿಸಲಾಗಿದೆ” ಎಂದರು.
ಕೈಲಾಶೋ ಅವರನ್ನು ಸ್ವಾಗತಿಸಿದ ಹೂಡಾ, “ಹರ್ಯಾಣದಲ್ಲಿ ಸುಮಾರು 40 ಮಾಜಿ ಶಾಸಕರು ಮತ್ತು ಸಂಸದರು ಈಗಾಗಲೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ, ಇತ್ತೀಚೆಗೆ ಪಕ್ಷಕ್ಕೆ ನೀಡಿದ ಮೂವರು ಸ್ವತಂತ್ರ ಶಾಸಕರ ಬೆಂಬಲವನ್ನು ಹೊರತುಪಡಿಸಿ. ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಬಹು,ತ ಕಳೆದುಕೊಂಡಿದೆ; ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ್ದೇವೆ” ಎಂದರು.
ಕೈಲಾಶೋ ಅವರು ಸುಮಾರು ಮೂರು ದಶಕಗಳಿಂದ ಕುರುಕ್ಷೇತ್ರದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು 1996 ರ ಲೋಕಸಭಾ ಚುನಾವಣೆಯಲ್ಲಿ ಸೋಶಿಯಲ್ ಆಕ್ಷನ್ ಪಾರ್ಟಿಯ ಟಿಕೆಟ್‌ನಲ್ಲಿ ಕುರುಕ್ಷೇತ್ರದಲ್ಲಿ ಸ್ಪರ್ಧಿಸಿದರು. ಆದರೆ, ಹರಿಯಾಣ ವಿಕಾಸ್ ಪಕ್ಷದ ಅಭ್ಯರ್ಥಿ ಓ ಪಿ ಜಿಂದಾಲ್ ಅವರು ಚುನಾವಣಾ ಯುದ್ಧದಲ್ಲಿ ಗೆದ್ದರು. 1998 ರಲ್ಲಿ, ಅವರು ಹರಿಯಾಣ ಲೋಕದಳ (ರಾಷ್ಟ್ರೀಯ) ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಕಾಂಗ್ರೆಸ್‌ನ ಕುಲದೀಪ್ ಶರ್ಮಾ ಅವರನ್ನು ಸೋಲಿಸಿದರು. ಐಎನ್‌ಎಲ್‌ಡಿ ಅಭ್ಯರ್ಥಿಯಾಗಿ ಕೈಲಾಶೋ ಕ್ಷೇತ್ರದಿಂದ 1999 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಓ ಪಿ ಜಿಂದಾಲ್ ಅವರನ್ನು ಸೋಲಿಸಿದರು. ಜಿಂದಾಲ್ ಪುತ್ರ ನವೀನ್ ಜಿಂದಾಲ್ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
2009ರಲ್ಲಿ ಹೂಡಾ ಮುಖ್ಯಮಂತ್ರಿಯಾಗಿದ್ದಾಗ ಕೈಲಾಶೋ ಕಾಂಗ್ರೆಸ್ ಸೇರಿದ್ದರು. ಆದಾಗ್ಯೂ, ಅವರು ಎರಡು ವಿಧಾನಸಭಾ ಚುನಾವಣೆಗಳಲ್ಲಿ (2009 ಮತ್ತು 2014) ಲಾಡ್ವಾ ಕ್ಷೇತ್ರದಿಂದ ಸೋತರು. 2019 ರ ವಿಧಾನಸಭಾ ಚುನಾವಣೆಗೆ ಮುನ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
ಇದನ್ನೂ ಓದಿ; ಮುಂದಿನ 10 ವರ್ಷಗಳಲ್ಲಿ ಒಡಿಶಾವನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ: ನವೀನ್ ಪಟ್ನಾಯಕ್


