“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತೀಯ ಸೇನೆಯಿಂದ ಹತ್ಯೆಯಾದ ಉಗ್ರರ ಕುಟುಂಬಗಳಿಗೆ ಪರಿಹಾರ ನೀಡುತ್ತೇವೆ ಮತ್ತು ಸೆರೆಮನೆಯಲ್ಲಿರುವ ಎಲ್ಲಾ ಉಗ್ರರನ್ನು ಬಿಡುಗಡೆ ಮಾಡುತ್ತೇವೆ” (ಸಗೀರ್ ಸಯೀದ್ ಖಾನ್- ಕಾಂಗ್ರೆಸ್ ನಾಯಕ) ಎಂದು ಬರೆದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
‘ಕೇಸರಿ ಪಡೆ’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್ : ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ‘ಸಗೀರ್ ಸಯೀದ್ ಖಾನ್’ ಎಂದು ಬರೆದಿರುವುದರಿಂದ ನಾವು ಆ ವ್ಯಕ್ತಿ ಅಂತಹ ಹೇಳಿಕೆ ಕೊಟ್ಟಿದ್ದಾರೆಯೇ? ಎಂದು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ.
ಗೂಗಲ್‌ನಲ್ಲಿ ಕೀ ವರ್ಡ್ ಬಳಸಿ ಹುಡುಕಾಡಿದಾಗ 26 ಡಿಸೆಂಬರ್ 2018ರಂದು ‘ರಿಪಬ್ಲಿಕ್ ವರ್ಲ್ಡ್’ ಸುದ್ದಿ ವಾಹಿನಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ದೊರೆತಿದೆ. “Congress Makes Terror Reward Promise In Jammu And Kashmir” ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ನಾಯಕರ ಸಗೀರ್ ಸಯೀದ್ ಖಾನ್ ಅವರ ಹೇಳಿಕೆಯಿದೆ.

ವಿಡಿಯೋದಲ್ಲಿ, “ಕಾಶ್ಮೀರವನ್ನು ಸ್ವರ್ಗ ಎಂದು ಕರೆಯಲಾಗುತ್ತಿತ್ತು, ಈಗ ಶವಗಳಿಂದ ತುಂಬಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಲ್ಲಿ ಕೊಲ್ಲಲ್ಪಟ್ಟ ಅಮಾಯಕರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಮತ್ತು ಒಬ್ಬರಿಗೆ ಉದ್ಯೋಗ ನೀಡಲಾಗುವುದು. ಭಯೋತ್ಪಾದನೆ ಪ್ರಕರಣಗಳಲ್ಲಿ ಕಂಬಿ ಹಿಂದೆ ಬಿದ್ದಿರುವ ಅಮಾಯಕರನ್ನು ಬಿಡುಗಡೆ ಮಾಡಲಾಗುವುದು. ಇಲ್ಲಿನ ಹತ್ಯೆಗಳಿಗೆ ಕಾರಣರಾದ ಬಿಜೆಪಿ ನಾಯಕರು, ಅವರು ಎಷ್ಟೇ ಪ್ರಮುಖರು ಮತ್ತು ಶಕ್ತಿಶಾಲಿಗಳಾಗಿದ್ದರೂ, ಹೊಸ ಕಾನೂನನ್ನು ಜಾರಿಗೊಳಿಸಲಾಗುವುದು ಮತ್ತು ಅವರನ್ನು ಗಲ್ಲಿಗೇರಿಸಲಾಗುವುದು. ಏಕೆಂದರೆ ಸೇನೆಯು ಅವರ ಆದೇಶವನ್ನು ಅನುಸರಿಸುತ್ತಿದೆ” ಎಂದು ಸಗೀರ್ ಸಯೀದ್ ಖಾನ್ ಹೇಳಿರುವುದು ಇದೆ.
ಡಿಸೆಂಬರ್ 27, 2018ರಂದು “Congress Leader Sagheer Saeed Khan Lands Party In A Soup” ಎಂಬ ಶೀರ್ಷಿಕೆಯಲ್ಲಿ ಎಬಿಪಿ ನ್ಯೂಸ್ ಕೂಡ ಈ ಕುರಿತ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿತ್ತು. ಅದರಲ್ಲೂ ಕಾಶ್ಮೀರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆಯ ಹೆಸರಿನಲ್ಲಿ ಕೊಲ್ಲಲ್ಪಟ್ಟ ನಿರ್ದೋಷಿಗಳ ಕುಟುಂಬ ಸದಸ್ಯರಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುತ್ತೇವೆ. ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ. ಶಂಕಿತ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದು” ಎಂದು ಖಾನ್ ಹೇಳಿರುವುದು ಇದೆ.

ಸಗೀರ್ ಸಯೀದ್ ಹೇಳಿಕೆಯನ್ನು ಕಾಂಗ್ರೆಸ್ ನಿರಾಕರಿಸಿತ್ತು:
ಮಾಧ್ಯಮಗಳಲ್ಲಿ ವರದಿಯಾದ ಸಗೀರ್ ಸಯೀದ್ ಖಾನ್ ಅವರ ಹೇಳಿಕೆಯ ಕುರಿತು ಡಿಸೆಂಬರ್ 26, 2018 ರಂದು ಫೇಸ್‌ಬುಕ್ ಪೋಸ್ಟ್ ಮೂಲಕ ಜಮ್ಮು ಕಾಶ್ಮೀರ ಕಾಂಗ್ರೆಸ್ (ಜೆಕೆಪಿಸಿಸಿ) ಪ್ರತಿಕ್ರಿಯಿಸಿತ್ತು. ಜೆಕೆಪಿಸಿಸಿ ಮುಖ್ಯಸ್ಥ ರವೀಂದರ್ ಶರ್ಮಾ ಅವರು ವಿಡಿಯೋ ಮೂಲಕ ಮಾತನಾಡಿ ಸಗೀರ್ ಸಯೀದ್ ಅವರ ಹೇಳಿಕೆಯನ್ನು ನಿರಾಕರಿಸಿದ್ದರು. ಸಗೀರ್ ಅವರು ಜೆಕೆಪಿಸಿಸಿಯ ಅನುಮತಿ ಇಲ್ಲದೆ ಪಕ್ಷದ ನೀತಿಯ ಬಗ್ಗೆ ಯಾವುದೇ ಹೇಳಿಕೆ ನೀಡಲು ಅನುಮತಿಯಿಲ್ಲ. ಅವರು ಪಕ್ಷದ ವಕ್ತಾರರಲ್ಲ. ಪಕ್ಷದ ಅಲ್ಪಸಂಖ್ಯಾತ ವಿಭಾಗದಿಂದ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.

“ಭಯೋತ್ಪಾದನೆಯನ್ನು ಕಟ್ಟುನಿಟ್ಟಾಗಿ ಎದುರಿಸಬೇಕು ಮತ್ತು ಜನರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುವುದು ಪಕ್ಷದ ನಿಲುವು. ಕೇಂದ್ರ ನಾಯಕತ್ವದ ಅನುಮೋದನೆ ಮತ್ತು ನಾಮನಿರ್ದೇಶಿತ ಅಧಿಕೃತ ವಕ್ತಾರರ ಅನುಮೋದನೆಯಿಲ್ಲದೆ ಈ ವಿಷಯದಲ್ಲಿ ಯಾವುದೇ ಹೇಳಿಕೆ ನೀಡಲು ಯಾರಿಗೂ ಅಧಿಕಾರವಿಲ್ಲ. ಹಾಗಾಗಿ ಸಗೀರ್ ಖಾನ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು” ಎಂದು ರವಿಂದರ್ ಶರ್ಮಾ ಹೇಳಿದ್ದರು.
ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದ ಅಂಶವೆಂದರೆ, ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಮುಖ್ಯಸ್ಥರಾಗಿದ್ದ ಹಾಜಿ ಸಗೀರ್ ಸಯೀದ್ ಖಾನ್ ಅವರು, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆಯ ಹೆಸರಿನಲ್ಲಿ ಕೊಲ್ಲಲ್ಪಟ್ಟ ಅಮಾಯಕ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಮತ್ತು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದಿದ್ದರು. ಅಲ್ಲದೆ, ಭಯೋತ್ಪಾದನೆಯ ಹೆಸರಿನಲ್ಲಿ ಬಂಧಿತರಾಗಿರುವ ಅಮಾಯಕನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅಲ್ಲದೆ, ಹತ್ಯೆಯಾದ ಉಗ್ರರ ಕುಟುಂಬಗಳಿಗೆ ಪರಿಹಾರ, ಉದ್ಯೋಗ ನೀಡಲಾಗುವುದು ಮತ್ತು ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದು ಹೇಳಿರಲಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ವಿಡಿಯೋ 2018ರದ್ದಾಗಿದೆ. ಅಲ್ಲದೆ, ಸಗೀರ್ ಸಯೀದ್ ಅವರ ಹೇಳಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿತ್ತು.
ಇದನ್ನೂ ಓದಿ : FACT CHECK : ಕಾಂಗ್ರೆಸ್‌ಗೆ ಮತ ಹಾಕಲು ವಿದೇಶದಿಂದ ಬರುವ ಮುಸ್ಲಿಮರಿಗೆ ಆರ್ಥಿಕ ನೆರವು ಘೋಷಣೆ ಮಾಡಿರುವ ವೈರಲ್ ಪತ್ರ ನಕಲಿ


