ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮುಂದುವರಿದಿದ್ದು, ಇಂಫಾಲ್ ಪೂರ್ವದಲ್ಲಿರುವ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮಣಿಪುರ ಪೊಲೀಸ್‌ನ ನಾಲ್ವರು ಸಿಬ್ಬಂದಿಯನ್ನು ಅಪಹರಿಸಿ, ಕಣ್ಣಿಗೆ ಬಟ್ಟೆ ಕಟ್ಟಿ ಹಲ್ಲೆ ನಡೆಸಿದ ಆರೋಪದ ಮೇಲೆ ಮೈತೈ ಗುಂಪಿನ ಇಬ್ಬರನ್ನು ಬಂಧಿಸಲಾಗಿದೆ.
ಮೈತೈ ಗುಂಪು ಅರಂಬೈ ತೆಂಗೋಲ್‌ನ ಸದಸ್ಯರು ಪೊಲೀಸ್ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡಿ ಅಪಹರಣ ಮತ್ತು ಹಲ್ಲೆ ನಡೆಸುತ್ತಿದ್ದಾರೆ. ಇದು ಈ ವರ್ಷದಲ್ಲಿ ನಡೆದ ಎರಡನೇ ಘಟನೆಯಾಗಿದೆ.
ಇಂದು ಬೆಳಿಗ್ಗೆ ಈ ಕುರಿತು ಮಣಿಪುರ ಪೊಲೀಸರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತೈಬಂಗಂಬ ಸನೌಜಮ್(25) ಮತ್ತು ಮೊಯರಂಗತೇಮ್ ಬೋಬೋ(40) ಅವರನ್ನು ಪೊಲೀಸ್ ಸಿಬ್ಬಂದಿಯ ಅಪಹರಣ ಮತ್ತು ದೈಹಿಕ ಹಲ್ಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಇಂಫಾಲ್ ಪೂರ್ವದಿಂದ ನಾಲ್ವರು ರಕ್ಷಣಾ ಪಡೆ ಸಿಬ್ಬಂದಿಗಳಾದ ರಾಮ್ ಬಹದ್ದೂರ್ ಕರ್ಕಿ, ರಮೇಶ್ ಬುಧಥೋಕಿ, ಮನೋಜ್ ಖತಿವೋಡಾ ಮತ್ತು ಎಂಡಿ ತಾಜ್ ಖಾನ್ ಕರ್ತವ್ಯದಲ್ಲಿದ್ದರು, ಅವರನ್ನು ತಡೆದು ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್‌ಪೋಕ್ಪಿ ಜಿಲ್ಲೆಯ ಪೊಲೀಸ್ ಅಧಿಕಾರಿಯ ಪ್ರಕಾರ, ಶನಿವಾರ ಬೆಳಿಗ್ಗೆ ಇಂಫಾಲ್‌ನ ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ಕಮಾಂಡೋ ಕಾಂಪ್ಲೆಕ್ಸ್‌ನಿಂದ ಕೆಲವು ವಸ್ತುಗಳನ್ನು ಸಂಗ್ರಹಿಸಲು ನಾಲ್ವರನ್ನು ನಿಯೋಜಿಸಲಾಗಿತ್ತು. ನಾಲ್ವರು ಸಿಬ್ಬಂದಿಗಳು ಮೈತೈ ಅಥವಾ ಕುಕಿ ಸಮುದಾಯಕ್ಕೆ ಸೇರಿದವರಲ್ಲ. ಮೂವರು ನೇಪಾಳಿ ಸಮುದಾಯದವರಾಗಿದ್ದು, ಒಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದ್ದಾರೆ.
ಪೊಲೀಸರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಅವರನ್ನು ನಂತರ ಬಿಡುಗಡೆ ಮಾಡಲಾಯಿತು ಆದರೆ ಅವರ ಮೊಬೈಲ್ ಫೋನ್‌ಗಳು ಮತ್ತು ಅವರಲ್ಲಿದ್ದ ಹಣವನ್ನು ದೋಚಲಾಗಿದೆ ಎಂದು ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ, ವಾಹನಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಅರಾಂಬೈ ತೆಂಗೋಲ್ ಸಂಘಟನೆಯ ಕೆಲವು ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಇಂಫಾಲ್ ಪೂರ್ವದಲ್ಲಿ ಆ ಬಳಿಕ ಹೆಚ್ಚುವರಿ ಪೊಲೀಸ್ ಸೂಪರಿಂಡೆಂಟ್ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಪಹರಿಸಲಾಗಿತ್ತು. ಬಳಿಕ ಅವರನ್ನು ರಕ್ಷಿಸಲಾಗಿದೆ.
ಭಾರತದ ಈಶಾನ್ಯದಲ್ಲಿರುವ ಪ್ರಶಾಂತವಾದ ಬೆಟ್ಟ ಗುಡ್ಡಗಳಾವೃತ ಪುಟ್ಟ ರಾಜ್ಯ ಮಣಿಪುರ ಮೇ 3, 2023ರಿಂದ ಹಿಂಸಾಚಾರದ ಸುಳಿಯಲ್ಲಿ ಸಿಲುಕಿ ಹೆಣಗಾಡುತ್ತಿದೆ. ರಾಜ್ಯದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ನೂರಾರು ಜನರು ಕೊಲ್ಲಲ್ಪಟ್ಟಿದ್ದಾರೆ. ಹಲವಾರು ಮಂದಿ ಇನ್ನೂ ಕಾಣೆಯಾಗಿದ್ದಾರೆ. ಒಂದು ವರ್ಷದ ಹಿಂಸಾಚಾರ, ಜನರು ತಮ್ಮ ವ್ಯವಹಾರ, ಮನೆ, ಆಸ್ತಿ ಮತ್ತು ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವಂತೆ ಮಾಡಿದೆ. ರಾಜ್ಯ ಈ ಹಿಂದಿನಂತೆ ಶಾಂತಿಯುತ ಸಹಜ ಸ್ಥಿತಿಗೆ ಮರಳುವ ಲಕ್ಷಣ ಇನ್ನೂ ಕಾಣುತ್ತಿಲ್ಲ.
ದಾಖಲೆಗಳ ಪ್ರಕಾರ, ಮಣಿಪುರ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ. ದೌರ್ಜನ್ಯದ ವರದಿಗಳು ಅತ್ಯಂತ ಭೀಕರವಾಗಿದೆ. ಹಿಂಸಾಚಾರದಿಂದ ರಾಜ್ಯ ಎರಡು ಭಾಗಗಳಾಗಿದ್ದು, ಭೂಮಿ ಮತ್ತು ಇತರ ಸೌಲಭ್ಯಗಳು ಮೈತೇಯಿ ಮತ್ತು ಕುಕಿ ಎಂಬ ಎರಡು ಸಮುದಾಯಗಳ ನಡುವೆ ಧಾರ್ಮಿಕ ಮತ್ತು ಜನಾಂಗೀಯ ರೇಖೆಗಳಲ್ಲಿ ವಿಂಗಡಣೆಯಾಗಿದೆ.
ಇದನ್ನು ಓದಿ: ಮೋದಿ ಕೈಗೆ ಮತ್ತೆ ಅಧಿಕಾರ ಕೊಟ್ಟರೆ ಬಡವರು, ದಲಿತರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ: ಮಲ್ಲಿಕಾರ್ಜುನ ಖರ್ಗೆ


