ಆಪಾದಿತ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಮೇ 13) ವಜಾಗೊಳಿಸಿದೆ.
ಕೇಜ್ರಿವಾಲ್ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಹೇಳಿದೆ. ಅಲ್ಲದೆ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅರ್ಜಿದಾರ ಕಾಂತ್ ಭಾಟಿ ಅವರು ಹೈಕೋರ್ಟ್‌ನ ಅರ್ಜಿದಾರರಲ್ಲ ಎಂದು ಪೀಠ ತಿಳಿಸಿದೆ.
ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ಸಂದೀಪ್ ಕುಮಾರ್ ಎಂಬವರು, “ಯಾವ ಅಧಿಕಾರ, ಅರ್ಹತೆ ಮತ್ತು ಶೀರ್ಷಿಕೆಯ ಮೂಲಕ ಕೇಜ್ರಿವಾಲ್ ಅವರು ಸಂವಿಧಾನದ 239ಎಎ ಅಡಿಯಲ್ಲಿ ದೆಹಲಿಯ ಮುಖ್ಯಮಂತ್ರಿ ಹುದ್ದೆಯನ್ನು ಮುಂದುವರೆಸಿದ್ದಾರೆ ಎಂಬುವುದನ್ನು ತೋರಿಸಲು ಮತ್ತು ವಿಚಾರಣೆಯ ನಂತರ ಕೇಜ್ರಿವಾಲ್ ಅವರನ್ನು ಸಿಎಂ ಕಚೇರಿಯಿಂದ ಹೊರ ಹಾಕುವಂತೆ ಕೋರಿದ್ದರು.
ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್ ಅವರು ಸಂವಿಧಾನದ 239ಎಎ (4), 167 (ಬಿ) ಮತ್ತು (ಸಿ) ವಿಧಿಗಳ ಅಡಿಯಲ್ಲಿ ತಮ್ಮ ಸಾಂವಿಧಾನಿಕ ಬಾಧ್ಯತೆಗಳು ಮತ್ತು ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಹೀಗಾಗಿ, ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದಿದ್ದರು.
ಮುಖ್ಯಮಂತ್ರಿಯ ಗೈರು ಹಾಜರಿಯ ಹಿನ್ನೆಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರು ಸಂವಿಧಾನದ 167 (ಸಿ) ವಿಧಿಯಡಿಯಲ್ಲಿ ಅವರ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸದಂತೆ ತಡೆಯಲಾಗುತ್ತಿದೆ ಎಂದು ಅರ್ಜಿದಾರ ಹೇಳಿದ್ದರು.
ಏಪ್ರಿಲ್ 10 ರಂದು ಪಿಐಎಲ್ ವಜಾಗೊಳಿಸಿದ್ದ ಹೈಕೋರ್ಟ್, ಅರ್ಜಿದಾರನಿಗೆ 50 ಸಾವಿರ ರೂ. ದಂಡ ವಿಧಿಸಿತ್ತು. ಈ ಪಿಐಎಲ್ ಪ್ರಚಾರವನ್ನು ಗಳಿಸುವ ಉದ್ದೇಶ ಹೊಂದಿದೆ ಎಂದು ಅಭಿಪ್ರಾಯಪಟ್ಟಿತ್ತು. ಈ ರೀತಿಯ ಪಿಐಎಲ್ ನಿರಾಕರಿಸಿ ನ್ಯಾಯಾಲಯ ಮೂರು ಆದೇಶಗಳನ್ನು ನೀಡಿದ್ದರೂ, ಮತ್ತೆ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಮೇ 10ರಂದು ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1ರವರೆಗೆ 20 ದಿನಗಳ ಮಧ್ಯಂತರ ಜಾಮೀನು ನೀಡಿದೆ.
ಇದನ್ನೂ ಓದಿ : ಮೋದಿ ಕೈಗೆ ಮತ್ತೆ ಅಧಿಕಾರ ಕೊಟ್ಟರೆ ಬಡವರು, ದಲಿತರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ: ಮಲ್ಲಿಕಾರ್ಜುನ ಖರ್ಗೆ


