ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಜನರು ಸರತಿ ಸಾಲಿನಲ್ಲಿ ನಿಂತು ಮತದಾನವನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಸರತಿ ಸಾಲನ್ನು ಮೀರಿ ಮತದಾನಕ್ಕೆ ತೆರಳಿದ್ದ ಶಾಸಕರನ್ನು ಪ್ರಶ್ನಿಸಿದ ಮತದಾರನಿಗೆ ಶಾಸಕರು ಮತ್ತು ಅವರ ಬೆಂಬಲಿಗರು ಥಳಿಸಿರುವ ಘಟನೆ ನಡೆದಿದೆ. ಇದಲ್ಲದೆ ರಾಜ್ಯದಲ್ಲಿ ಹಲವೆಡೆ ಹಿಂಸಾತ್ಮಕ ಘಟನೆಗಳು ವರದಿಯಾಗಿದೆ.
ವೈಎಸ್ಆರ್‌ಸಿಪಿ ತೆನಾಲಿ ಕ್ಷೇತ್ರದ ಶಾಸಕ ಅನ್ನಾಬತ್ತಿನ ಶಿವಕುಮಾರ್ ತೆನಾಲಿಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಮತದಾರನೋರ್ವನಿಗೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಶಾಸಕರು ಮತದಾರನಿಗೆ ಕಪಾಳಮೋಕ್ಷ ಮಾಡುವುದು ಮತ್ತು ಇದಕ್ಕೆ ಪ್ರತಿಯಾಗಿ ಶಾಸಕರಿಗೆ ಮತದಾರ ಮರು ಕಪಾಳಮೋಕ್ಷ ಮಾಡಿರುವುದು ಸೆರೆಯಾಗಿದೆ. ಈ ವೇಳೆ ಶಾಸಕರ ಬೆಂಬಲಿಗರು ಆತನಿಗೆ ಹಿಗ್ಗಾ-ಮುಗ್ಗಾ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
#AndhraPradesh: A voter questioned the incumbent @YSRCParty MLA Annabathina Shiva Kumar fOR skipping the queue in #Tenali. Irked by the questioning, the MLA was seen slapping the voter.
In return, the voter slapped back at the MLA, and his supporters stepped in, hitting the… pic.twitter.com/BOXhwX9wcu
— South First (@TheSouthfirst) May 13, 2024
ಇನ್ನು ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಮಾಚರ್ಲಾ ಕ್ಷೇತ್ರದ ರೆಂಟಾಲಾ ಮತ್ತು ಪಲಾಂಡು ಜಿಲ್ಲೆಯ ಗುರಜಾಲದಲ್ಲಿ ಉದ್ವಿಗ್ನತೆ ಉಂಟಾಗಿದೆ. ಎರಡೂ ಕಡೆಯವರು ಪರಸ್ಪರ ಕಲ್ಲುಗಳನ್ನು ತೂರಾಟ ನಡೆಸಿದ್ದಾರೆ, ದೊಣ್ಣೆಗಳನ್ನು ಬಳಸಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗವು ಪಲ್ನಾಡು ರೆಂಟಾಲ ಮತ್ತು ಇತರ ಸ್ಥಳಗಳಿಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿ ಸುಗಮವಾಗಿ ಚುನಾವಣೆ ನಡೆಸುವಂತೆ ಸಿಇಒಗೆ ಸೂಚಿಸಿದೆ.
ಇನ್ನು ಅನ್ನಮಯ್ಯ ಜಿಲ್ಲೆಯ ಪುಲ್ಲಂಪೇಟೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಮತಗಟ್ಟೆಗೆ ನುಗ್ಗಿ ಇವಿಎಂಗಳನ್ನು ಹಾನಿಗೊಳಿಸಿದ್ದಾರೆ. ಪ್ರಕಾಶಂ ಜಿಲ್ಲೆಯ ದರ್ಸಿ ವಿಧಾನಸಭಾ ಕ್ಷೇತ್ರದ ಬೊಟ್ಲಪಾಲೆಂ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಇವಿಎಂಗಳು ಹಾನಿಗೊಂಡಿದೆ, ಇದರಿಂದ ಕೆಲಕಾಲ ಉದ್ವಿಗ್ನತೆ ಉಂಟಾಗಿತ್ತು. ಚುನಾವಣಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿ ಮತ್ತೆ ಮತದಾನಕ್ಕೆ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಪ್ರಕ್ಷಂ ಜಿಲ್ಲಾ ಚುನಾವಣಾಧಿಕಾರಿ ಎಎಸ್ ದಿನೇಶ್ ಕುಮಾರ್ ಆದೇಶಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ತೊಂದರೆಯಾಗದಂತೆ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ.
ಚಿತ್ತೂರು ಜಿಲ್ಲೆಯ ಕಾರ್ವೇಟಿನಗರದ ಅಣ್ಣೂರು ಗ್ರಾಮದಲ್ಲಿ ಉಪ ಮುಖ್ಯಮಂತ್ರಿ ಕೆ ನಾರಾಯಣ ಸ್ವಾಮಿ ಮತ್ತು ಟಿಡಿಪಿ ಶಾಸಕ ಥಾಮಸ್ ಅವರ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಇದರಿಂದ ಕೆಲಕಾಲ ಉದ್ವಿಗ್ನತೆ ಉಂಟಾಗಿತ್ತು.
ಅಮದಲವಲಸ ವಿಧಾನಸಭಾ ಕ್ಷೇತ್ರದ ಪೊಂದೂರು ಮಂಡಲದ ಗೋಕರ್ಣಪಲ್ಲಿಯಲ್ಲಿ ಟಿಡಿಪಿ ಮತ್ತು ವೈಎಸ್‌ಆರ್‌ಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಶ್ರೀಕಾಕುಳಂ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ವೈಎಸ್‌ಆರ್‌ಸಿ ಅಭ್ಯರ್ಥಿ ತಮಿನೇನಿ ಸೀತಾರಾಂ ಅವರ ಪತ್ನಿ ತಮಿನೇನಿ ವಾಣಿ ಅವರು ಜನರಲ್ ಏಜೆಂಟ್ ಆಗಿ ಮತಗಟ್ಟೆಗೆ ಪ್ರವೇಶಿಸಿದ್ದು, ಟಿಡಿಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು ಘರ್ಷಣೆಗೆ ಕಾರಣವಾಗಿದೆ.
ಮತ್ತೊಂದೆಡೆ, ಪುಂಗನೂರು ವಿಧಾನಸಭಾ ಕ್ಷೇತ್ರದ ಸದ್ದುಂ ಮಂಡಲದ ಬೋರಕಮಂಡ ಗ್ರಾಮದಲ್ಲಿ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟ್‌ಗಳನ್ನು ವೈಎಸ್‌ಆರ್‌ಸಿ ಕಾರ್ಯಕರ್ತರು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕೂಡಲೇ ಪೊಲೀಸರು ಅವರನ್ನು ಪಿಲೇರುವಿನಲ್ಲಿ ಪತ್ತೆ ಹಚ್ಚಿ ಬೋರಕಮಂಡಕ್ಕೆ ಕರೆತಂದಿದ್ದಾರೆ.
ಇದನ್ನು ಓದಿ: ಮೋದಿ ಕೈಗೆ ಮತ್ತೆ ಅಧಿಕಾರ ಕೊಟ್ಟರೆ ಬಡವರು, ದಲಿತರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ: ಮಲ್ಲಿಕಾರ್ಜುನ ಖರ್ಗೆ


