ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಕೆಆರ್ ನಗರ ಸಂತ್ರಸ್ತೆಯ ಅಪಹರಣದಲ್ಲಿ ಜೈಲು ಸೇರಿದ್ದ ಶಾಸಕ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್‌ಐಟಿ ಪರ ವಾದ ಮಂಡಿಸಿದ ಜಯ್ನಾ ಕೊಠಾರಿಯವರು, ಜಾಮೀನಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ರೇವಣ್ಣ ಅವರೇ ಅಪಹರಣಕ್ಕೆ ಯೋಜನೆ ರೂಪಿಸಿದ್ದಾರೆ; ಇತರೆ ಆರೋಪಿಗಳು ಈಗಾಗಲೇ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ” ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಕಿಡ್ನ್ಯಾಪ್ ಕೇಸ್ ಗಂಭೀರತೆ ಬಗ್ಗೆ ಕೋರ್ಟ್ ಗಮನಕ್ಕೆ ತಂದ ಎಸ್‌ಪಿಪಿ ಜಯ್ನಾ ಕೊಠಾರಿ, ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ವಾದ ಮಂಡಿಸಿದರು.
ಕಪೋಲಕಲ್ಪಿತ ಮಾಹಿತಿ ಕಲೆ ಹಾಕ್ತಿದ್ದಾರೆ; ಸಂತ್ರಸ್ತೆ ಮೇಲೆ ಯಾವುದೇ ಮಾರಣಾಂತಿಕ ಹಲ್ಲೆಯಾಗಿಲ್ಲ. ಪ್ರಕರಣದಲ್ಲಿ ಸಾಕ್ಷಿ ಕಲೆ ಹಾಕುವುದೇ ತಡವಾಗಿದೆ. ಪ್ರಾಥಮಿಕವಾಗಿ ಏನ್ ಮಾಡಬೇಕೋ ಅದನ್ನ ಸರಿಯಾಗಿ ಮಾಡಿಲ್ಲ. 364ಎ ಅಡಿ ಎಫ್‌ಐಆರ್ ದಾಖಲಾಗಿರುವುದೇ ಕಾನೂನುಬಾಹಿರ ಎಂದು ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರು.
“ರೇವಣ್ಣ ಅವರು ರಾಹುಕಾಲ, ಸಮಯ ಸರಿಇಲ್ಲ ಮತ್ತು ಹೊಟ್ಟೆ ನೋವು ಎಂಬ ಅನೇಕ ಕಾರಣ ನೀಡಿ ತನಿಖೆಗೆ ಸಹಕಾರ ನೀಡಿಲ್ಲ. ಹಾಗಾಗಿ, ಅವರಿಗೆ ಜಾಮೀನು ನೀಡಬಾರದು” ಎಂದು ಎಸ್‌ಐಟಿ ತಂಡದ ವಕೀಲರಾದ ಜಯ್ನಾ ಕೊಠಾರಿ ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ; ಇವಿಎಂ-ವಿವಿಪ್ಯಾಟ್ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಕೆ


