ಸೋಮವಾರ ಸಂಜೆ ಬೀಸಿದ ಭಾರೀ ಗಾಳಿಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಅವಘಡ ಸಂಭವಿಸಿದ್ದು, ಬೃಹತ್ ಜಾಹೀರಾತು ಫಲಕ ಕುಸಿದು 14 ಮಂದಿ ಸಾವನ್ನಪ್ಪಿದ್ದಾರೆ. 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮುಂಬೈನ ಘಾಟ್‌ಕೋಪರ್ ಪ್ರದೇಶದ ಚೆಡ್ಡಾನಗರದಲ್ಲಿ 100 ಅಡಿಯ ಜಾಹೀರಾತು ಫಲಕ ಭಾರೀ ಗಾಳಿಗೆ ಪಕ್ಕದ ಪೆಟ್ರೋಲ್ ಬಂಕ್ ಮೇಲೆ ಬಿದ್ದಿದೆ. ಇದರಿಂದ ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ವಾಹನಗಳು ಜಖಂಗೊಂಡಿವೆ.
ಎರಡು ಎನ್‌ಡಿಆರ್‌ಎಫ್ ತಂಡಗಳು, ಮುಂಬೈ ಅಗ್ನಿಶಾಮಕದಳ ಮತ್ತು ಇತರ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದುವರೆಗೆ 14 ಮಂದಿ ಮೃತಪಟ್ಟಿರುವುದಾಗಿ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಖಚಿತಪಡಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆಸ್ಪತ್ರೆಗೆ ದಾಖಲಾಗಿದ್ದ ಗಾಯಗಳುಗಳ ಪೈಕಿ ಇದುವರೆಗೆ 35 ಮಂದಿ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರ ಸರ್ಕಾರದ ಪೊಲೀಸ್ ವಸತಿ ವಿಭಾಗವು ಪೊಲೀಸ್ ಕಲ್ಯಾಣ ನಿಗಮಕ್ಕೆ ಗುತ್ತಿಗೆ ಪಡೆದಿರುವ ಪ್ಲಾಟ್‌ನಲ್ಲಿ ‘ಈಗೋ ಮೀಡಿಯಾ’ ಎಂಬ ಸಂಸ್ಥೆ ಬೃಹತ್ ಜಾಹೀರಾತು ಫಲಕ ನಿರ್ಮಿಸಿತ್ತು. ಕಟ್ಟಡದ ಆವರಣದಲ್ಲಿ ಈಗೋ ಮೀಡಿಯಾದ ನಾಲ್ಕು ಜಾಹೀರಾತು ಫಲಕಗಳಿತ್ತು. ಈ ಪೈಕಿ ಸೋಮವಾರ ಸಂಜೆ ಒಂದು ಫಲಕ ಕುಸಿದಿದೆ. ಘಟನೆ ಸಂಬಂಧ ಈಗೋ ಮೀಡಿಯಾದ ಮಾಲೀಕರು ಮತ್ತು ಇತರರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಲ್ಲಾ ನಾಲ್ಕು ಜಾಹೀರಾತು ಫಲಕಗಳನ್ನು ಸ್ಥಾಪಿಸಲು ಈಗೋ ಮೀಡಿಯಾ ಸಹಾಯಕ ಪೊಲೀಸ್ ಆಯುಕ್ತರ (ರೈಲ್ವೆ) ಅನುಮತಿ ಪಡೆದಿತ್ತು. ಆದರೆ, ಫಲಕ ಸ್ಥಾಪಿಸುವ ಮುನ್ನ ಬಿಎಂಸಿಯಿಂದ ಯಾವುದೇ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ರೈಲ್ವೆ ಪೊಲೀಸ್‌ನ ಎಸಿಪಿ ಮತ್ತು ರೈಲ್ವೆ ಕಮಿಷನರ್‌ಗೆ ಬಿಎಂಸಿ ನೋಟಿಸ್ ಜಾರಿ ಮಾಡಿದ್ದು, ರೈಲ್ವೇ ನೀಡಿರುವ ಎಲ್ಲಾ ಅನುಮತಿಗಳನ್ನು ರದ್ದುಗೊಳಿಸುವಂತೆ ಮತ್ತು ಜಾಹೀರಾತು ಫಲಕಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.
ಮುಂಬೈನಲ್ಲಿ ಸೋಮವಾರ ಸಂಜೆ ಹಠಾತ್ ಆಗಿ ಧೂಳು ಮಿಶ್ರಿತ ಗಾಳಿ ಬೀಸಿದ್ದು, ಅಲ್ಲಲ್ಲಿ ಜಾಹೀರಾತು ಫಲಕಗಳು, ಮರಗಳು ಮತ್ತು ಇತರ ನಿರ್ಮಾಣ ಕಾಮಗಾರಿಗಳು ಕುಸಿದು ಬಿದ್ದಿವೆ. ಬಳಿಕ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
Photo Courtesy: telegraphindia.com
ಇದನ್ನೂ ಓದಿ : ರಾಯ್ ಬರೇಲಿಯನ್ನು ನನ್ನ ಹೊಸ ಕರ್ಮಭೂಮಿಯನ್ನಾಗಿ ಸ್ವೀಕರಿಸಿದ್ದೇನೆ: ರಾಹುಲ್ ಗಾಂಧಿ


