ರಾಷ್ಟ್ರ ರಾಜಧಾನಿ ದೆಹಲಿಯನ್ನು ಮಾಲಿನ್ಯ ಮುಕ್ತ ಮತ್ತು ಡೆಂಘೀ ಮುಕ್ತ ಮಾಡಲು ಪಣ ತೊಟ್ಟಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ದೆಹಲಿಯ ಬೀದಿ ಬದಿ ವ್ಯಾಪಾರಿಗಳು, ಮಾರಾಟಗಾರರ ರಕ್ಷಣೆಗೆ ಹೊಸ ಕಾಯಿದೆ ರೂಪಿಸಿದೆ. ನಗರದಿಂದ ಹೊರ ಹಾಕಲಾಗುತ್ತೆ ಎಂಬ ಆತಂಕದಲ್ಲಿದ್ದ ಬೀದಿ ಬದಿ ವ್ಯಾಪಾರಿಗಳು ಮತ್ತು ಮಾರಾಟಗಾರರಿಗೆ ಹೊಸ ಕಾಯಿದೆ ರಕ್ಷಣೆ ನೀಡಲಿದೆ. ಐದು ವರ್ಷಗಳ ಸುದೀರ್ಘ ಪ್ರಯತ್ನದ ನಂತರ ಶಾಸನ ಮೊದಲ ಬಾರಿ ಪರಿಚಯಿಸಲ್ಪಟ್ಟಿದೆ.
ಕಾಯಿದೆ ಬಗ್ಗೆ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, `ದೆಹಲಿ ಸರ್ಕಾರ ವರ್ಧಿತ ಪಟ್ಟಣ ಮಾರಾಟ ಸಮಿತಿ (ಟಿವಿಸಿ- ಟೌನ್ ವೆಂಡಿಂಗ್ ಕಮಿಟಿ) ಸರ್ವೇ ನಡೆಸಿತ್ತು. ನಗರದಲ್ಲಿ ಎಷ್ಟು ಮಂದಿ ಬೀದಿಬದಿ ವ್ಯಾಪಾರಿಗಳು ಮತ್ತು ಮಾರಾಟಗಾರರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಅವರಿಗೆ ವಿತರಣಾ ಪ್ರಮಾಣ ಪತ್ರ ಮತ್ತು ನಿಶ್ಚಿತ ಸ್ಥಳದಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿದೆ’ ಎಂದು ಹೇಳಿದರು.
ಬೀದಿ ಬದಿ ವ್ಯಾಪಾರಿಗಳು ಮತ್ತು ಮಾರಾಟಗಾರರು ಇಲ್ಲದೇ ನಗರದ ಚಟುವಟಿಕೆಗಳನ್ನು ನಡೆಸುವುದು ಕಷ್ಟ. ಇತರೆ ನಾಗರಿಕರಿಗೆ ತೊಂದರೆಯಾಗದಂತೆ ಚಟುವಟಿಕೆ ನಡೆಸುವಂತೆ ತಿಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮಾರಾಟಗಾರರು ಪ್ರಾಮಾಣಿಕತೆಯಿಂದ ಬದುಕಲು ಮತ್ತು ಕಾರ್ಯನಿರ್ವಹಿಸಲು ಅನುಕೂಲ ಮಾಡಿ ಕೊಡಲಾಗುವುದು. ಪೊಲೀಸರಿಂದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಈ ವರ್ಷಾಂತ್ಯದ ವೇಳೆಗೆ ಲೈಸೆನ್ಸ್ ಕೂಡ ನೀಡಲಾಗುವುದು ಎಂದು ಹೇಳಿದರು.
ಅಂದಹಾಗೇ ಸ್ಟ್ರೀಟ್ ವೆಂಡರ್ಸ್ ಆ್ಯಕ್ಟ್ ನ್ನು 2014ರಲ್ಲಿ ಕಾನೂನುತಜ್ಞರು ಪರಿಚಯಿಸಿದರು. ದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತು ಮಾರಾಟಗಾರರ ರಕ್ಷಣೆಗೆ ಆ್ಯಕ್ಟ್ ಜಾರಿಗೆ ತಂದಿತು. ಮಾರಾಟಗಾರರಿಗೆ ಕೆಲ ಪ್ರದೇಶಗಳನ್ನು ಪರಿಚಯಿಸಲಾಗಿದೆ. ಟಿವಿಸಿ ಜಾರಿ ಮಾಡಿ, ಲೈಸೆನ್ಸ್ ನೀಡಲಾಗುತ್ತಿದೆ. ಈ ಕ್ರಮದಿಂದ ಜನರ ಬದುಕು, ಭದ್ರತೆ ಸುಧಾರಿಸಲಿದೆ ಎಂದು ಹೇಳಿದರು.


