ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ ಸಂಸದೆ ಸ್ವಾತಿ ಮಲಿವಾಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಮೇ 13ರಂದು ಸ್ವಾತಿ ಮಲಿವಾಲ್ ಸಿಎಂ ನಿವಾಸದ ಭದ್ರತೆಯನ್ನು ಉಲ್ಲಂಘಿಸಿ ಅನಧಿಕೃತವಾಗಿ ಪ್ರವೇಶಿಸಿದ್ದಾರೆ. ಈ ವೇಳೆ ನಾನು ತಡೆಯಲು ಯತ್ನಿಸಿದ್ದೇನೆ ಆಗ ನನಗೆ ನಿಂದನೆ ಮಾಡಿದ್ದಾರೆ ಎಂದು ಬಿಭವ್ ಕುಮಾರ್ ಆರೋಪಿಸಿದ್ದಾರೆ.
ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಇ-ಮೇಲ್ ಮೂಲಕ ಸಲ್ಲಿಸಿದ ದೂರಿನಲ್ಲಿ, ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಹೋದಾಗ ಮುಖ್ಯಮಂತ್ರಿಗಳ ನಿವಾಸದಲ್ಲಿ ತನ್ನ ಮೇಲೆ ಸ್ವಾತಿ ಹಲ್ಲೆ ನಡೆಸಿದ್ದಾರೆ, ಇದೀಗ ದೂರು ನೀಡುವ ಮೂಲಕ ತನ್ನನ್ನು ತಪ್ಪಾಗಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕುಮಾರ್ ಅವರು ತಮ್ಮ ದೂರಿನ ಪ್ರತಿಯನ್ನು ಪೊಲೀಸ್ ಉಪ ಆಯುಕ್ತರಿಗೆ ಕಳುಹಿಸಿದ್ದಾರೆ. ಮಲಿವಾಲ್ ಅವರು ಸಿಎಂ ನಿವಾಸದ ಭದ್ರತೆಯನ್ನು ಉಲ್ಲಂಘಿಸಿ, ಬಲವಂತವಾಗಿ ಮತ್ತು ಅನಧಿಕೃತವಾಗಿ ಪ್ರವೇಶಿಸಿ ಅಲ್ಲಿ ಗದ್ದಲ ಸೃಷ್ಟಿಸಿದ್ದಾರೆ. ನಾನು ಆಕೆಯನ್ನು ತಡೆಯಲು ಯತ್ನಿಸಿದಾಗ ದೈಹಿಕವಾಗಿ ಹಲ್ಲೆ ಮಾಡುವ ಉದ್ದೇಶದಿಂದ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೇ 13ರಂದು ರಾಜ್ಯಸಭಾ ಸಂಸದೆ ಎಂದು ಭದ್ರತಾ ಸಿಬ್ಬಂದಿಗೆ ಹೇಳುವ ಮೂಲಕ ಮಲಿವಾಲ್ ಅವರು ಸಿಎಂ ನಿವಾಸಕ್ಕೆ ನುಗ್ಗಿದ್ದು, ಭದ್ರತಾ ಅಧಿಕಾರಿಗಳ ಆಕ್ಷೇಪಣೆಗಳ ಹೊರತಾಗಿಯೂ ಅವರು ಬಲವಂತವಾಗಿ ಸಿಎಂ ನಿವಾಸಕ್ಕೆ ಪ್ರವೇಶಿಸಿದ್ದಾರೆ ಎಂದು ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 9:22ಕ್ಕೆ ಕುಮಾರ್ ಸಿಎಂ ನಿವಾಸದ ಮುಖ್ಯ ಕೊಠಡಿಗೆ ಪ್ರವೇಶಿಸಿದಾಗ ಮಲಿವಾಲ್ ಅವರು ಅಲ್ಲಿ ಕುಳಿತಿರುವುದು ಕಂಡು ಬಂದಿದೆ. ಮಲಿವಾಲ್ ಅವರ ಬಳಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಸರಿಯಾದ ವಿಧಾನವನ್ನು ಅನುಸರಿಸುವಂತೆ ನಯವಾಗಿ ವಿನಂತಿಸಿದೆ. ಇದಕ್ಕೆ ಮಲಿವಾಲ್ ನನ್ನ ಮೇಲೆ ಕಿರುಚಲು ಮತ್ತು ನಿಂದಿಸಲು ಪ್ರಾರಂಭಿಸಿದರು. ಮಲಿವಾಲ್ ಬಳಿಕ ಕೇಜ್ರಿವಾಲ್ ನಿವಾಸದ ಒಳಭಾಗದ ಕಡೆಗೆ ನಡೆಯಲು ಪ್ರಾರಂಭಿಸಿದರು. ಅವರು ಕೇಜ್ರಿವಾಲ್‌ಗೆ ಹಾನಿ ಮಾಡುವ ಉದ್ದೇಶ ಹೊಂದಿದ್ದರು. ಇದಕ್ಕೆ ನಾನು ಬಲವಾಗಿ ಆಕ್ಷೇಪಿಸಿದ್ದೇನೆ ಎಂದು ಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ನಿವಾಸದಿಂದ ಹೊರಹೋಗುವಂತೆ ಮಲಿವಾಲ್‌ಗೆ ಮನವಿ ಮಾಡಿದಾಗ, ಅವರು ನಾನು ನಿಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತೇನೆ, ನೀವು ನಿಮ್ಮ ಇಡೀ ಜೀವನವನ್ನು ಜೈಲಿನಲ್ಲಿ ಕಳೆಯುವಂತೆ ಮಾಡುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
ಮಲಿವಾಲ್ ಅವರು ಅತಿಕ್ರಮ ಪ್ರವೇಶ ಮಾಡಿದ್ದಾರೆ, ಸಿಎಂ ನಿವಾಸದ ಭದ್ರತೆಯನ್ನು ಉಲ್ಲಂಘಿಸಿದ್ದಾರೆ, ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸದಂತೆ ತಡೆದು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ.
ಮಲಿವಾಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇದು ಚುನಾವಣಾ ಸಮಯವಾದ್ದರಿಂದ ಇದೆಲ್ಲವೂ ಬಿಜೆಪಿಯ ಆಜ್ಞೆಯ ಮೇರೆಗೆ ನಡೆದಿರಬಹುದು. ಅವರ ಕರೆ, ದಾಖಲೆಗಳು, ಚಾಟ್‌ಗಳು ಮತ್ತು ಬಿಜೆಪಿ ನಾಯಕರೊಂದಿಗಿನ ಸಂವಾದದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಕುಮಾರ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ಮೇ 13ರಂದು ಕೇಜ್ರಿವಾಲ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಲು ಹೋದಾಗ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಲಿವಾಲ್ ಕುಮಾರ್ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನು ಓದಿ: ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್


