“ಜಿಹಾದಿ ಶಾರುಖ್ ಖಾನ್‌ನ ಭಾರೀ ಬಜೆಟ್‌ನಿಂದ ತಯಾರಾದ ದೇಶದ್ರೋಹಿ, ಮತಾಂಧ ತಿಪ್ಪೆ ಸುಲ್ತಾನನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಸಿನಿಮಾವನ್ನು ಬಹಿಷ್ಕರಿಸಲು ಶೇರ್ ಮಾಡಿ” ಎಂದು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ಈ ವಿಷಯದಲ್ಲಿ ಕೋಮು ದ್ವೇಷದ ಅಂಶವಿರುವುದರಿಂದ ಸತ್ಯಾಸತ್ಯತೆ ಪರಿಶೀಲಿಸಿ, ಅದನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ.
ಮೊದಲು ನಾವು ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಕುರಿತು ಸಿನಿಮಾ ಮಾಡುವ ಬಗ್ಗೆ ಎಲ್ಲಾದರು ಸುದ್ದಿ ಪ್ರಕಟಗೊಂಡಿದೆಯಾ? ಎಂದು ಹುಡುಕಿದ್ದೇವೆ. ಈ ವೇಳೆ ನಮಗೆ ಆ ಬಗ್ಗೆ ಯಾವುದೇ ಖಚಿತವಾದ ಸುದ್ದಿ ದೊರೆತಿಲ್ಲ. ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಆ ಬಗ್ಗೆ ಸುದ್ದಿ ಪ್ರಕಟಿಸಿರುವುದು ನಮಗೆ ಕಂಡು ಬಂದಿಲ್ಲ.
ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ 22 ನವೆಂಬರ್ 2018ರಂದು ‘ಸೂಫಿ ಸ್ಟುಡಿಯೋ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ‘Tipu Sultan Trailer Shah Rukh Khan New movie,टीपू सुल्तान, Mysore Tiger’ ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ದೊರೆತಿದೆ.

ಈ ವಿಡಿಯೋವನ್ನು ಪರಿಶೀಲಿಸಿದಾಗ ಆರಂಭದಲ್ಲೇ ಸೂಚನೆಯೊಂದನ್ನು ಹಾಕಿರುವುದು ಕಂಡು ಬಂದಿದೆ. “ಇದು ಅಭಿಮಾನಿ ನಿರ್ಮಿತ ಟ್ರೈಲರ್ ಆಗಿದ್ದು, ಮನೋರಂಜನೆ ಉದ್ದೇಶಗಳಿಗಾಗಿ ಬಳಸಲಾಗಿದೆ. ಈ ವಿಡಿಯೋವನ್ನು ಬೇರೆ ಬೇರೆ ವಿಡಿಯೋ ಕ್ಲಿಪ್‌ಗಳಿಂದ ಬಳಸಿಕೊಳ್ಳಲಾಗಿದೆ. ವಿಡಿಯೋದ ಎಲ್ಲಾ ಹಕ್ಕುಗಳು ಮಾಲೀಕರಿಗೆ ಸೀಮಿತವಾಗಿದೆ” ಎಂದು ಸೂಚನೆಯಲ್ಲಿ ಹೇಳಲಾಗಿದೆ.

ಹಾಗಾಗಿ, ಬರೋಬ್ಬರಿ 92 ಸಾವಿರ ವೀಕ್ಷಣೆ ಪಡೆದಿರುವ ಈ ವಿಡಿಯೋ ಕೇವಲ ಮನೋರಂಜನೆ ಉದ್ದೇಶಕ್ಕಾಗಿ ಮಾಡಲಾಗಿದೆ. ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಸಿನಿಮಾ ಮಾಡುತ್ತಿರುವ ಬಗೆಗಿನ ಖಚಿತ ಮಾಹಿತಿಯಲ್ಲ ಎನ್ನಬಹುದು.
ಮೇ 8, 2020ರಂದು ‘ಇಂಡಿಯಾ ಟುಡೇ’ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ “ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆಯೇ?” ಎಂಬ ಶೀರ್ಷಿಕೆಯಲ್ಲಿ ಫ್ಯಾಕ್ಟ್ ಚೆಕ್ ನಡೆಸಿ ವರದಿ ಪ್ರಕಟಿಸಿತ್ತು. ಈ ವರದಿಯಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ಸುಳ್ಳು ಎಂದಿತ್ತು.

ನಾವು ನಡೆಸಿದ ಪರಿಶೀಲನೆಯಲ್ಲಿ, ನಟ ಶಾರುಖ್ ಖಾನ್ ಅವರು ಟಿಪ್ಪು ಸುಲ್ತಾನ್ ಕುರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಸುಳ್ಳು ಎಂಬುವುದು ಖಚಿತವಾಗಿದೆ. ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ‘ಟಿಪ್ಪು ಸುಲ್ತಾನ್’ ಎಂಬ ಹೆಸರನ್ನು ಮುಂದಿಟ್ಟುಕೊಂಡು ಶಾರುಖ್ ಅವರನ್ನು ಬಹಿಷ್ಕರಿಸಲು ಹೇಳುವ ಮೂಲಕ ಮುಸ್ಲಿಮರ ವಿರುದ್ದ ದ್ವೇಷ ಹರಡುವ ಪ್ರಯತ್ನ ಮಾಡಿರುವುದು ಗೊತ್ತಾಗಿದೆ. ಅಲ್ಲದೆ, ಇದೇ ಸುಳ್ಳು ಸುದ್ದಿ ಈ ಹಿಂದೆಯೂ ಹರಡಿತ್ತು ಎಂಬುವುದು ದಿನಾಂಕಗಳನ್ನು ಪರಿಶೀಲಿಸಿದಾಗ ಖಚಿತವಾಗಿದೆ.
ಇದನ್ನೂ ಓದಿ : FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು


