ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ದಲಿತ ವೃದ್ಧ ದಂಪತಿಯನ್ನು ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ ಎಂಬುದನ್ನು ಪೊಲೀಸರು ಭಾನುವಾರ ಖಚಿತಪಡಿಸಿದ್ದಾರೆ.
ದಂಪತಿಯ ಮಗ ಮಹಿಳೆಯೊಬ್ಬರಿಗೆ ಕೀಟಲೆ ಮಾಡಿದ ಘಟನೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿದ ಜನ, ವೃದ್ದ ದಂಪತಿಗಳನ್ನು ಥಳಿಸಿದ್ದಾರೆ.
ಮುಂಗೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲೋರಾ ಗ್ರಾಮದಲ್ಲಿ ಶುಕ್ರವಾರ ನಡೆದ ದಂಪತಿಗೆ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಂಪತಿಯ ಪುತ್ರ ಆರೋಪಿಗಳಲ್ಲಿ ಒಬ್ಬನ ಪತ್ನಿಯನ್ನು ‘ಈವ್ ಟೀಸಿಂಗ್’ನಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ದಲಿತ ಕುಟುಂಬವು ಗ್ರಾಮವನ್ನು ತೊರೆದಿದೆ ಎಂದು ಮುಂಗೋಲಿ ಪೊಲೀಸ್ ಠಾಣೆಯ ಉಸ್ತುವಾರಿ ಗಬ್ಬರ್ ಸಿಂಗ್ ಗುರ್ಜರ್ ಹೇಳಿದ್ದಾರೆ. ದಂಪತಿ ಇತ್ತೀಚೆಗಷ್ಟೆ ಗ್ರಾಮಕ್ಕೆ ಬಂದಿದ್ದರು ಎಂದರು.
ಶುಕ್ರವಾರ, ಆರೋಪಿಗಳು 65 ವರ್ಷದ ದಲಿತ ವ್ಯಕ್ತಿ ಮತ್ತು 60 ವರ್ಷ ವಯಸ್ಸಿನ ಆತನ ಪತ್ನಿಯನ್ನು ಕಂಬಕ್ಕೆ ಕಟ್ಟಿ, ಥಳಿಸಿ, ಶೂಗಳ ಹಾರವನ್ನು ಧರಿಸುವಂತೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಶನಿವಾರ ಪೊಲೀಸರು 10 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 147 (ಗಲಭೆ), 149 (ಸಾಮಾನ್ಯ ಉದ್ದೇಶದಿಂದ ಕಾನೂನುಬಾಹಿರ ಸಭೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 294 (ಅಶ್ಲೀಲ). 506 (ಅಪರಾಧ ಬೆದರಿಕೆ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಲ್ಲಾ ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ವೃದ್ಧ ದಲಿತ ದಂಪತಿಯ ಮೇಲಿನ ಈ ಹೇಯ ಕೃತ್ಯ ಎಸಗಿದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ; ಎಎಪಿ ನಾಯಕರಿಂದ ಪ್ರತಿಭಟನೆ; ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಬಿಗಿ ಭದ್ರತೆ


