ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅಳವಡಿಸುವಂತೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಕಚೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಚತಾ ಸಿಬ್ಬಂದಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಡಿಸೆಂಬರ್ 21, 2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅಳವಡಿಸುವ ನೀತಿಯನ್ನು ಜಾರಿಗೊಳಿಸಲು ನಿರ್ಣಯಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುವ ಎಲ್ಲಾ ಹೊರಗುತ್ತಿಗೆ ನೇಮಕಾತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಮೀಸಲಾತಿ ನಿಯಮಗಳು ಹೀಗಿವೆ..
- ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ.
- ಪ್ರತಿವರ್ಷ ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಕೆಟಿಪಿಪಿ ಅಧಿನಿಯಮ 1999ರಂತೆ ಟೆಂಡರ್ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿ ಸಿಬ್ಬಂದಿಯನ್ನು ಪಡೆಯಲು ಷರತ್ತುಗಳನ್ನು ನಮೂದಿಸಬೇಕು.
- ಹೊರಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿ ಪ್ರಮಾಣದಲ್ಲಿ ಕನಿಷ್ಠ ಶೇ.33ರಷ್ಟು ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಬೇಕು.
- ಟೆಂಡರ್ ಅಂಗೀಕರಿಸುವ ಪ್ರಾಧಿಕಾರ ಕಡ್ಡಾಯವಾಗಿ ಹೊರ ಸಂಪನ್ಮೂಲ ಏಜೆನ್ಸಿಯು ಅಂತಿಮಗೊಳಿಸಿದ ಸಿಬ್ಬಂದಿಯ ಪಟ್ಟಿ ಮೀಸಲಾತಿಯಂತೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಜಾತಿ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಹೊರ ಸಂಪನ್ಮೂಲ ಏಜೆನ್ಸಿ ಪಡೆದು ನಿರ್ವಹಿಸಬೇಕು. ಟೆಂಡರ್ ಅಂಗೀಕರಿಸುವ ಪ್ರಾಧಿಕಾರ ಈ ಬಗ್ಗೆ ಪರಿಶೀಲಿಸಿ ಕಾರ್ಯಾದೇಶವನ್ನು ನೀಡ0ಲು ಕ್ರಮವಹಿಸಬೇಕು. (ಸಿಂಧುತ್ವ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ)
Karnataka becomes a model state in introducing #reservation in outsourced and temporary jobs in all government departments
I hope that this is rolled out in all states and even in the central government. Great job by @siddaramaiah ji pic.twitter.com/zoz1XSv5Us— Nethrapal (@nethrapal) May 20, 2024
- ಒಂದು ವೇಳೆ ನೇಮಕಾತಿಗೊಂಡ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ/ ಅರ್ಧದಲ್ಲಿ ಬಿಟ್ಟಿದಲ್ಲಿ ಅಂತಹ ಖಾಲಿ ಉಳಿಯುವ ಸ್ಥಾನವನ್ನು ಭರ್ತಿ ಮಾಡಲು ಅದೇ ಪ್ರವರ್ಗದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅಭ್ಯರ್ಥಿಗಳನ್ನು ಒದಗಿಸುವ ಏಜೆನ್ಸಿ ಕ್ರಮ ಕೈಗೊಳ್ಳಬೇಕು.
- ಯಾವುದೇ ಇಲಾಖೆ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸಬೇಕು.
- ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಅಭ್ಯರ್ಥಿಯ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 60 ವರ್ಷಗಳಾಗಿರಬೇಕು.
- ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗವಕಾಶಗಳನ್ನು ಒದಗಿಸುವ ದೃಷ್ಠಿಯಿಂದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಅಳವಡಿಸುವುದರಿಂದ ಯಾವುದೇ ಕಾರಣಕ್ಕಾಗಿ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಲು ಪರಿಗಣಿಸುವಂತಿಲ್ಲ.
ಈ ಮೇಲಿನ ನಿಯಮಗಳು ಸರ್ಕಾರದ ಎಲ್ಲಾ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಮಂಡಳಿಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಅನ್ವಯಿಸಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್ ಡಿ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ


