ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿಗೆ ಗೌರವಾರ್ಥವಾಗಿ ಮಂಗಳವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಭಾರತದಾದ್ಯಂತ ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗುವುದು ಮತ್ತು ಶೋಕಾಚರಣೆಯ ಅವಧಿಯಲ್ಲಿ ಯಾವುದೇ ಅಧಿಕೃತ ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದಿಲ್ಲ ಎಂದು ಗೃಹ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಗೃಹ ಸಚಿವಾಲಯದ ವಕ್ತಾರರು ಈ ಕುರಿತು ಮಾಹಿತಿ ನೀಡಿದ್ದು, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಸೆಯ್ಯದ್ ಇಬ್ರಾಹಿಂ ರೈಸಿ ಮತ್ತು ದೇಶದ ವಿದೇಶಾಂಗ ಸಚಿವ ಹುಸೇನ್ ಅಮಿತ್-ಅಬ್ದುಲ್ಲಾಹಿಯಾನ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಗೌರವಾರ್ಪಣೆ ಹಿನ್ನೆಲೆ ಭಾರತ ಸರ್ಕಾರವು ಮೇ 21 ರಂದು (ಮಂಗಳವಾರ) ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ರೈಸಿ ಅವರ ಸಾವಿನ ದೃಢೀಕರಣದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ರೈಸಿ ಅವರ ದುರಂತ ನಿಧನದಿಂದ ನನಗೆ ಅತೀವ ದುಃಖವಾಗಿದೆ ಮತ್ತು ಆಘಾತವಾಗಿದೆ. ಈ ದುಃಖದ ಸಮಯದಲ್ಲಿ ಭಾರತವು ಇರಾನ್‌ನೊಂದಿಗೆ ನಿಂತಿದೆ ಎಂದು ಹೇಳಿದ್ದರು.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿ ಇದ್ದ ಹೆಲಿಕಾಪ್ಟರ್ ಭಾನುವಾರ ಪತನವಾಗಿತ್ತು. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಅಧಿಕಾರಿಗಳು ಪರ್ವತ ಭೂಪ್ರದೇಶದ ಹಿಮಾವೃತ ವಾತಾವರಣದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿಯೊಬ್ಬರು ಸೋಮವಾರ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದ ನಂತರ ಹೇಳಿದ್ದರು.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಇರಾನ್‌ನ ತಬ್ರೀಝ್ ನಗರದಲ್ಲಿ ಆಝರ್‌ಬೈಜಾನ್‌ನ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆಗೂಡಿ ಖಿಝ್ ಖಲಾಸಿ ಅಣೆಕಟ್ಟನ್ನು ಎರಡೂ ದೇಶಗಳು ಹಂಚಿರುವ ಗಡಿ ಸ್ಥಳದಲ್ಲಿ ಉದ್ಘಾಟಿಸಿ ವಾಪಸಾಗುತ್ತಿರುವಾಗ ಈ ಘಟನೆ ಸಂಭವಿಸಿತ್ತು. ಹಾರಾಟ ಆರಂಭಿಸಿದ ಸುಮಾರು 30 ನಿಮಿಷಗಳಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತ್ತು. ಇರಾನ್ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂಬ ಸುದ್ದಿ ಬೆನ್ನಲ್ಲಿ 60ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕೆಟ್ಟ ಹವಾಮಾನ ಪರಿಸ್ಥಿತಿಗಳ ನಡುವೆ ಶೋಧ ನಡೆಸಿದ್ದವು.
ಇದನ್ನು ಓದಿ: ಟಿಕೆಟ್ ಕೈತಪ್ಪಿದಕ್ಕೆ ‘ಮತದಾನ’ ಮಾಡದ ಬಿಜೆಪಿ ಸಂಸದ: ಶೋಕಾಸ್ ನೋಟಿಸ್ ಜಾರಿ


