ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಕಚೇರಿ ಮುಂದೆ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಸೋಮವಾರ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯ ಬಳಿ, ಎಎಪಿ ಮುಖಂಡರು ಯಾವುದೇ ಅನುಮತಿ ಪಡೆಯದೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರಣ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ ಇಂದ್ರಪ್ರಸ್ಥ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ, ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಕಾರ್ಯಕರ್ತರು ಬಿಜೆಪಿ ಕೇಂದ್ರ ಕಚೇರಿಯತ್ತ ಮೆರವಣಿಗೆ ನಡೆಸಿದರು ಮತ್ತು ಅವರನ್ನು ತಡೆಯಲು ಪೊಲೀಸರು ನಿರ್ಮಿಸಿದ್ದ 10 ಅಡಿ ಬ್ಯಾರಿಕೇಡ್‌ಗಳ ಮುಂದೆ ಕುಳಿತುಕೊಂಡರು. ಆದರೆ, ಕೇವಲ 20 ನಿಮಿಷದಲ್ಲಿ ಪ್ರತಿಭಟನೆ ಅಂತ್ಯಗೊಂಡಿದ್ದು, ಸಿಎಂ ಕೇಜ್ರಿವಾಲ್ ಸೇರಿದಂತೆ ಎಲ್ಲ ಮುಖಂಡರು ಪಕ್ಷದ ಕಚೇರಿಗೆ ಮರಳಿದರು.
ಪ್ರತಿಭಟನಾ ಮೆರವಣಿಗೆಗೆ ಮುನ್ನ, ಕೇಜ್ರಿವಾಲ್ ಅವರು ಎಎಪಿಯನ್ನು ಹತ್ತಿಕ್ಕಲು ಬಿಜೆಪಿ “ಆಪರೇಷನ್ ಝಾದು” ಅನ್ನು ರೂಪಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ಸಮಯದಲ್ಲಿ ಯಾವುದೇ ಘಟನೆಗಳನ್ನು ತಡೆಗಟ್ಟಲು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ದೆಹಲಿ ಪೊಲೀಸರು ಗಮನಾರ್ಹ ಸಂಖ್ಯೆಯ ಅಧಿಕಾರಿಗಳು ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಿದ್ದರು.
ಇದನ್ನೂ ಓದಿ; ಪ್ರಜ್ವಲ್ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದ ಎಸ್‌ಐಟಿ


