“ಭಾರತದ ಸಂವಿಧಾನದ ಮೂಲ ಪ್ರತಿಯ ಬಣ್ಣ ನೀಲಿಯಾಗಿದೆ. ಚೀನಾದ ಸಂವಿಧಾನದ ಮೂಲ ಪ್ರತಿಯ ಬಣ್ಣ ಕೆಂಪು. ರಾಹುಲ್ ಗಾಂಧಿ ಚೀನಾದ ಸಂವಿಧಾನ ತೋರಿಸಿದ್ದಾರೆಯೇ? ನಾವು ಈ ಬಗ್ಗೆ ಪರಿಶೀಲಿಸಬೇಕಿದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು, ರಾಹುಲ್ ಗಾಂಧಿ ಸಂವಿಧಾನದ ಪ್ರತಿಯನ್ನು ತೋರಿಸಿರುವ ಫೋಟೋ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಹಿಮಂತ್ ಬಿಸ್ವಾ ಶರ್ಮಾ ಅವರ ಎಕ್ಸ್ ಪೋಸ್ಟ್‌ಗೆ ಅಲ್ಲಿಯೇ ಪ್ರತಿಕ್ರಿಯೆ ಕೊಟ್ಟಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರು, ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರು ರಾಹುಲ್ ಗಾಂಧಿ ಪ್ರದರ್ಶಿಸಿದ ಬಣ್ಣದ್ದೇ ಸಂವಿಧಾನದ ಪ್ರತಿಯನ್ನು ವ್ಯಕ್ತಿಯೊಬ್ಬರಿಗೆ ನೀಡಿದ ಫೋಟೋ ಹಂಚಿಕೊಂಡಿದ್ದು, “ಹಿಮಂತ್ ಬಿಸ್ವಾ ಶರ್ಮಾ ಅವರೇ ನಿಮ್ಮ ಬಾಸ್ ಅಮಿತ್ ಶಾ ಅವರಲ್ಲಿ ಈ ಬಗ್ಗೆ ಪರಿಶೀಲಿಸಲು ಹೇಳಿ” ಎಂದಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಪ್ರದರ್ಶಿಸಿದ್ದು ಚೀನಾದ ಸಂವಿಧಾನ ಪ್ರತಿಯಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ ಸಂವಿಧಾನದ ಪ್ರತಿ ಪ್ರದರ್ಶಿಸಿದ ಫೋಟೋದ ಬಗ್ಗೆ ನಾವು ಗೂಗಲ್‌ನಲ್ಲಿ ಮಾಹಿತಿ ಹುಡುಕಿದಾಗ ಮೇ 6, 2024ರಂದು ಅದೇ ಫೋಟೋ ಬಳಸಿ business-standard.com ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ. ಆ ಸುದ್ದಿಯ ಪ್ರಕಾರ, ಮೇ 5ರಂದು ತೆಲಂಗಾಣದ ಗದ್ವಾಲ್‌ನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಗಾಂಧಿ ಸಂವಿಧಾನದ ಪ್ರತಿ ಪ್ರದರ್ಶಿಸಿದ್ದಾರೆ.
ರಾಹುಲ್ ಗಾಂಧಿ ಪ್ರದರ್ಶಿಸಿದ ಕೆಂಪು ಬಣ್ಣದ ಹೊದಿಕೆ (ಕವರ್) ಹೊಂದಿರುವ ಸಂವಿಧಾನದ ಪ್ರತಿಯ ಫೋಟೋವನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದ್ದೇವೆ. ಈ ವೇಳೆ ಆ ರೀತಿಯ ಹಲವು ಫೋಟೋಗಳು ಕಾಣಿಸಿಕೊಂಡಿವೆ.
ಮಾರ್ಚ್ 3, 2024ರಂದು ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಕೆಂಪು ಬಣ್ಣದ ಹೊದಿಕೆ ಹೊಂದಿರುವ ಸಂವಿಧಾನದ ಪ್ರತಿ ತೋರಿಸಿದ್ದರು. ಈ ಕುರಿತು ‘ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ’ ವರದಿ ಮಾಡಿತ್ತು. ಆ ವರದಿಯಲ್ಲಿ ರಾಹುಲ್ ಗಾಂಧಿ ಪ್ರದರ್ಶಿಸಿದ್ದು, ‘THE CONSTITUTION OF INDIA’ ಎಂದು ಸ್ಪಷ್ಟವಾಗಿ ಬರೆದಿರುವುದನ್ನು ನಾವು ನೋಡಬಹುದು.

‘ಬ್ಯುಸಿನೆಸ್ ಸ್ಟ್ಯಾಂಡರ್ಡ್’ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅದೇ ಫೋಟೊ ಪ್ರಕಟಿಸಿದ್ದು, ಎಲ್ಲದರಲ್ಲಿಯೂ ‘THE CONSTITUTION OF INDIA’ ಎಂದು ಬರೆದಿರುವುದನ್ನು ನಾವು ನೋಡಬಹುದು.

ರಾಹುಲ್ ಗಾಂಧಿಯವರು ಬಹುತೇಕ ಎಲ್ಲಾ ಸಾರ್ವಜನಿಕ ಸಭೆಗಳಿಗೆ ಕೋಟ್ ಪಾಕೆಟ್ ಎಡಿಷನ್‌ನ ಚಿಕ್ಕ ಗಾತ್ರದ ಭಾರತದ ಸಂವಿಧಾನದ ಪ್ರತಿಯನ್ನು ಕೊಂಡೊಯ್ಯುತ್ತಾರೆ. ‘ನಾವು ಸಂವಿಧಾನವನ್ನು ರಕ್ಷಿಸುತ್ತೇವೆ’ ಎಂದು ಪ್ರಮಾಣ ಮಾಡುತ್ತಾರೆ. ಈ ಕುರಿತು ಗೂಗಲ್‌ನಲ್ಲಿ ಹುಡುಕಿದಾಗ ಹಲವಾರು ಪ್ರಕಾಶನಗಳು ಕೆಂಪು ಮತ್ತು ಕಪ್ಪು ಬಣ್ಣದ ಭಾರತದ ಸಂವಿಧಾನದ ಚಿಕ್ಕಗಾತ್ರದ ಪ್ರತಿಯನ್ನು ಮುದ್ರಿಸಿರುವುದನ್ನು ನೋಡಬಹುದು. ಹಲವಾರು ಆನ್‌ಲೈನ್ ಫ್ಲಾಟ್‌ಫಾರಂಗಳಲ್ಲಿ ಅವುಗಳನ್ನು ನಾವು ಕೊಳ್ಳಬಹುದುದಾಗಿದೆ.


ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರಿಗೆ ಅದೇ ಕೆಂಪು ಬಣ್ಣದ ಹೊದಿಕೆ ಹೊಂದಿರುವ ಸಂವಿಧಾನದ ಪ್ರತಿಯನ್ನು ನೀಡಿದ್ದರು. ಈ ಕುರಿತ ಫೋಟೋಗಳನ್ನು ಮೊಹಮ್ಮದ್ ಝುಬೈರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಹಾಗಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಚೀನಾದ ಸಂವಿಧಾನದ ಪ್ರತಿ ತೋರಿಸಿದ್ದಾರೆಯೇ? ಎಂಬ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರ ಅನುಮಾನ ಅಥವಾ ಪ್ರತಿಪಾದನೆ ಸುಳ್ಳು. ಮೇಲೆ ನಾವು ಉಲ್ಲೇಖಿಸಿದ ಪುರಾವೆಗಳಿಂದ ರಾಹುಲ್ ಪ್ರದರ್ಶಿಸಿರುವುದು ಭಾರತದ ಸಂವಿಧಾನದ ಪ್ರತಿ ಎಂದು ಖಚಿತಪಡಿಸಬಹುದು.
ಇದನ್ನೂ ಓದಿ : FACT CHECK : ‘ಟಿಪ್ಪು ಸುಲ್ತಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬುವುದು ಸುಳ್ಳು


