ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ‘ಕೆಳಮಟ್ಟದ ವೈಯಕ್ತಿಕ ಟೀಕೆ’ಯ ಹಿನ್ನೆಲೆ ಬಿಜೆಪಿ ಅಭ್ಯರ್ಥಿ, ಮಾಜಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.
ಮಹಿಳೆಯರ ಘನತೆ ಮತ್ತು ಗೌರವವನ್ನು ಪ್ರಶ್ನಿಸುವ ಯಾವುದೇ ಟೀಕೆಗಳನ್ನು ಮಾಡಬಾರದು ಎಂದು ಅಭಿಜಿತ್ ಗಂಗೋಪಾಧ್ಯಾಯಗೆ ನಿರ್ದೇಶನವನ್ನು ನೀಡಲು ಬಿಜೆಪಿ ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ವಿಫಲರಾಗಿದ್ದಾರೆ ಎಂದು ಚುನಾವಣಾ ಆಯೋಗ ಇದೇ ವೇಳೆ ಹೇಳಿದೆ. ಮೇ 15ರಂದು ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು ಮತ್ತು ಬಿಜೆಪಿಯ ತಮ್ಲುಕ್ ಕ್ಷೇತ್ರದ ಅಭ್ಯರ್ಥಿಯ ಟೀಕೆಗಳ ವಿರುದ್ಧ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ ದೂರಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಆಯೋಗವು ಸೋಮವಾರ ಸಂಜೆಯೊಳಗೆ ಗಂಗೋಪಾಧ್ಯಾಯ ಅವರ ಪ್ರತಿಕ್ರಿಯೆಯನ್ನು ಕೇಳಿತ್ತು. ಅವರ ಪ್ರತಿಕ್ರಿಯೆ ಪಡೆದ ಬಳಿಕ ಈ ಆದೇಶವನ್ನು ನೀಡಿದೆ.
ಅಭಿಜಿತ್ ಗಂಗೋಪಾಧ್ಯಾಯ ಅವರಂತಹ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯ ವ್ಯಕ್ತಿಯಿಂದ ಅಸಹ್ಯಕರ ಮಾತುಗಳು ಬಂದಿವೆ ಎಂಬ ಅಂಶವನ್ನು ಆಯೋಗವು ನೋವಿನಿಂದ ಗಮನಿಸುತ್ತದೆ. ಮಹಿಳೆಯರಿಗೆ ಗೌರವ ನೀಡುವ ವಿಶಿಷ್ಟ ಸಂಪ್ರದಾಯವನ್ನು ಹೊಂದಿರುವ ಪ.ಬಂಗಾಳಕ್ಕೆ ಅವರು ಅಪಖ್ಯಾತಿ ತಂದಿದ್ದಾರೆ ಎಂದು ಚುನಾವಣಾ ಅಯೋಗವು ಗಮನಿಸಿದೆ.
ಗಂಗೋಪಾಧ್ಯಾಯ ಅವರು ಕೋಲ್ಕತ್ತಾ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದಾಗ ತೃಣಮೂಲ ಕಾಂಗ್ರೆಸ್ ಅವರನ್ನು ವ್ಯಾಪಕವಾಗಿ ಟೀಕಿಸಿತ್ತು. ಇತ್ತೀಚೆಗಷ್ಟೇ ನ್ಯಾಯಾಧೀಶರ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಮಹಿಳೆಯರ ಗೌರವ ಮತ್ತು ಘನತೆಗೆ ಚ್ಯುತಿ ತರುವಂತಹ ಯಾವುದೇ ಹೇಳಿಕೆಯನ್ನು ನೀಡದಂತೆ ಪಕ್ಷದ ಅಭ್ಯರ್ಥಿಗಳಿಗೆ ಮತ್ತು ಚುನಾವಣಾ ಪ್ರಚಾರಕರಿಗೆ ಸೂಚಿಸುವಂತೆ ಬಿಜೆಪಿ ಅಧ್ಯಕ್ಷರಿಗೆ ನಿರ್ದೇಶನ ನೀಡಿರುವ ಪತ್ರವನ್ನು ಚುನಾವಣಾ ಆಯೋಗವು ಆದೇಶದಲ್ಲಿ ಉಲ್ಲೇಖಿಸಿದೆ.
ಮೇ.16ರಂದು ತಮ್ಮ ದೂರಿನಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಡೆರೆಕ್ ಒಬ್ರೇನ್ ಗಂಗೋಪಾಧ್ಯಾಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು ಮತ್ತು ಚುನಾವಣಾ ಪ್ರಚಾರ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.
ಮೇ 21ರಂದು ಸಂಜೆ 5 ರಿಂದ 24 ಗಂಟೆಗಳ ಕಾಲ ಪ್ರಚಾರವನ್ನು ಮಾಡದಂತೆ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ನಿಷೇಧ ವಿಧಿಸಲಾಗಿದೆ. ತಾಮ್ಲುಕ್ ಕ್ಷೇತ್ರಕ್ಕೆ ಮೇ 25ರಂದು ಚುನಾವಣೆ ನಡೆಯಲಿದ್ದು, ಗುರುವಾರ ಪ್ರಚಾರ ಕೊನೆಗೊಳ್ಳಲಿದೆ.
ಮೇ 15ರಂದು ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಗಂಗೋಪಾಧ್ಯಾಯ, ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಗಂಗೋಪಾಧ್ಯಾಯ ಅವರು ನೋಟಿಸ್‌ಗೆ ನೀಡಿದ ಉತ್ತರವನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆ. ಅವರು ಮಮತಾ ವಿರುದ್ಧ ನೀಡಿದ್ದ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿದ್ದೇವೆ. ಮುಖ್ಯಮಂತ್ರಿ ವಿರುದ್ಧ ‘ಕೀಳುಮಟ್ಟದ ವೈಯಕ್ತಿಕ ದಾಳಿ’ ನಡೆಸಿ, ನೀತಿ ಸಂಹಿತೆ ಉಲ್ಲಂಘಿಸಿರುವುದು ಸಾಬೀತಾಗಿದೆ’ ಎಂದು ಆಯೋಗ ತಿಳಿಸಿದೆ.


