ಪೂರ್ವ ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಏಳು ನವಜಾತ ಶಿಶುಗಳ ಸಾವಿಗೆ ಕಾರಣವಾದ ಬೆಂಕಿ ಹೃದಯ ವಿದ್ರಾವಕವಾಗಿದೆ; ನಿರ್ಲಕ್ಷ್ಯಕ್ಕೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಚ್ಚರಿಸಿದ್ದಾರೆ.
ನಿರ್ಲಕ್ಷ್ಯ ತೋರಿದವರಿಗೆ ಅಥವಾ ಯಾವುದೇ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಕೂಡ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, “ವಿವೇಕ್ ವಿಹಾರ್‌ನಲ್ಲಿ ಸಂಭವಿಸಿದ ಬೆಂಕಿಯ ಘಟನೆಯಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡವರ ಜೊತೆ ಸರ್ಕಾರ ನಿಂತಿದೆ; ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆಯನ್ನು ಆಡಳಿತವು ಖಚಿತಪಡಿಸುತ್ತಿದೆ” ಎಂದು ಹೇಳಿದರು.
ಬೆಂಕಿಯ ಹಿಂದಿನ ಕಾರಣಗಳನ್ನು ತನಿಖೆ ಮಾಡಲಾಗುತ್ತಿದ್ದು, ನಿರ್ಲಕ್ಷ್ಯ ತೋರಿದವರನ್ನು ಬಿಡಲಾಗುವುದಿಲ್ಲ ಎಂದು ಅವರು ಹೇಳಿದರು.
ಶನಿವಾರ ರಾತ್ರಿ ಶಹದಾರದಲ್ಲಿರುವ ಬೇಬಿ ಕೇರ್ ನ್ಯೂ ಬಾರ್ನ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ಅಧಿಕಾರಿಗಳು ತಿಳಿಸಿದ್ದಾರೆ.
ಹನ್ನೆರಡು ನವಜಾತ ಶಿಶುಗಳನ್ನು ವೈದ್ಯಕೀಯ ಸೌಲಭ್ಯದಿಂದ ರಕ್ಷಿಸಲಾಗಿದೆ. ಆದರೆ, ಅವರಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಡಿಎಫ್‌ಎಸ್ ಮುಖ್ಯಸ್ಥ ಅತುಲ್ ಗಾರ್ಗ್ ಹೇಳಿದ್ದಾರೆ. ಐದು ಶಿಶುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ; ದೆಹಲಿಯ ಮಕ್ಕಳ ಆಸ್ಪತ್ರೆ ಅಗ್ನಿ ದುರಂತದಲ್ಲಿ 7 ನವಜಾತ ಶಿಶುಗಳ ಸಾವು


