ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಮಹಿಳೆ ದಿಢೀರ್ ಸಾವನ್ನಪ್ಪಿದ್ದು, ಈ ಕುರಿತು ಅನುಮಾನ ವ್ಯಕ್ತಪಡಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ತನಿಖೆಗೆ ಒತ್ತಾಯಿಸಿ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಮಾಜಿ ಸಿಎಂ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ 2024 ಮಾರ್ಚ್ 14ರಂದು ಯಡಿಯೂರಪ್ಪ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ, ಯಡಿಯೂರಪ್ಪ ಅವರ ಬಂಧನ ಆಗಿರಲಿಲ್ಲ. ದೂರು ವಾಪಸ್ ಪಡೆಯುವಂತೆ ಮಹಿಳೆಗೆ ಒತ್ತಡಗಳಿತ್ತು ಎಂದು ಜನವಾದಿ ಮಹಿಳಾ ಸಂಘಟನೆ ತಿಳಿಸಿದೆ.
ಇತ್ತೀಚೆಗೆ ಮೃತ ಮಹಿಳೆ ಜನವಾದಿ ಮಹಿಳಾ ಸಂಘಟನೆಯನ್ನು ಸಂಪರ್ಕಿಸಿ ಕಾನೂನು ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು. ಸಂಘಟನೆ ಹಿರಿಯ ವಕೀಲ ಎಸ್. ಬಾಲನ್ ಅವರನ್ನು ಸಂಪರ್ಕಿಸಿ ಕಾನೂನು ಸೇವೆ ನೀಡುವಂತೆ ಮನವಿ ಮಾಡಿತ್ತು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕೇಸ್ ಮಾಹಿತಿಗಳನ್ನು ಪಡೆದುಕೊಂಡ ಬಾಲನ್ ಅವರು, ಉಚಿತವಾಗಿ ಕಾನೂನು ಸೇವೆ ನೀಡಲು ಒಪ್ಪಿದ್ದರು ಎಂದು ಸಂಘಟನೆ ವಿವರಿಸಿದೆ.
ಮೇ 25ರಂದು(ಶನಿವಾರ) ಮಹಿಳೆಯೊಂದಿಗೆ ಮಾತನಾಡಿದ್ದ ವಕೀಲ ಬಾಲನ್ ಅವರು, ದಾಖಲೆಗಳೊಂದಿಗೆ ಮೇ 27ರಂದು (ಸೋಮವಾರ) ಕಚೇರಿಗೆ ಬರುವಂತೆ ಸೂಚಿಸಿದ್ದರು. ಈ ಮಧ್ಯೆ ಮೇ 26ರಂದು (ಭಾನುವಾರ) ಸಂಜೆ ಹುಳಿಮಾವು ಆಸ್ಪತ್ರೆಯಲ್ಲಿ ಮಹಿಳೆ ದಿಢೀರ್ ಸಾವನ್ನಪ್ಪಿದ್ದಾರೆ. ಮಾಧ್ಯಮಗಳಲ್ಲಿ ಮಹಿಳೆಯು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಈ ಸಾವು ಅನುಮಾನ ಹುಟ್ಟಿಸುವಂತಿದೆ ಎಂದು ಸಂಘಟನೆ ಹೇಳಿದೆ.
24 ಗಂಟೆಯ ಮೊದಲು ಕಾನೂನು ಸಮರ ನಡೆಸುವಷ್ಟು ಸಮರ್ಥಳಾಗಿದ್ದ ಮಹಿಳೆ ಏಕಾಏಕಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾಗಲು ಹೇಗೆ ಸಾಧ್ಯ? ನಮಗೆ ತಿಳಿದಂತೆ ಮಹಿಳೆಗೆ ಪುತ್ರಿ ಹೊರತು ಇನ್ಯಾರು ಸಂಬಂಧಿಕರಿಲ್ಲ. ಹೀಗಿರುವಾಗ, ಆಸ್ಪತ್ರೆಯ ಹಿಂಬಾಗಿಲಿನಿಂದ ಮಹಿಳೆಯ ಶವ ವಿಲೇವಾರಿ ಮಾಡಿದ ಸಂಬಂಧಿಕರು ಯಾರು? ಶವ ಸಾಗಿಸಲು ಹಿಂಬದಿಯ ಬಾಗಿಲು ಬಳಸಿದ್ದು ಏಕೆ? ಇದುವರೆಗೆ ಮಹಿಳೆಯ ಬಗ್ಗೆ ಕಾಳಜಿವಹಿಸದ ಸಂಬಂಧಿಕರು ದಿಢೀರನೆ ಆಗಮಿಸಿದ್ದು ಹೇಗೆ? ಶ್ವಾಸಕೋಶದ ಕ್ಯಾನ್ಸರ್ ಹಠಾತ್ ಸಾವು ತರಿಸುವ ಖಾಯಿಲೆಯಲ್ಲ. ಹಾಗಾಗಿ, ಮಹಿಳೆ ಏಕಾಏಕಿ ಸಾವನ್ನಪ್ಪಿದರೂ ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲ? ಎಂದು ಜನವಾದಿ ಸಂಘಟನೆ ಪ್ರಶ್ನಿಸಿದೆ. ಈ ಕುರಿತು ತನಿಖೆ ನಡೆಸುವಂತೆ ಹುಳಿಮಾವು ಪೊಲೀಸರನ್ನು ಆಗ್ರಹಿಸಿದೆ.
ಮೃತ ಮಹಿಳೆಯ ಸಂಬಂಧಿ ಶಿವಮೊಗ್ಗದ ಶಿಕಾರಿಪುರ ಮೂಲದ ನಾಗರಾಜ್ ಎಂಬವರು ಕೂಡ ಜನವಾದಿ ಸಂಘಟನೆ ಎತ್ತಿರುವ ಪ್ರಶ್ನೆಗಳನ್ನೇ ಎತ್ತಿ, ಮಹಿಳೆಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಯಡಿಯೂರಪ್ಪ ವಿರುದ್ಧ ಪೋಕ್ಸೋ ದೂರು ದಾಖಲಿಸಿದ್ದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಸಾವು


