ಮಂಗಳೂರಿನಲ್ಲಿ ರಸ್ತೆಯಲ್ಲಿ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಚೋದನಕಾರಿ ಪೋಸ್ಟ್ ಹಾಕಿದ ಹಿಂದುತ್ವ ಮುಖಂಡ ಶರಣ್ ಪಂಪ್‌ವೆಲ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಳೆದ ಶುಕ್ರವಾರ ನಗರದ ಕಂಕನಾಡಿಯಲ್ಲಿ ಮಸೀದಿ ಪಕ್ಕದ ಒಳ ರಸ್ತೆ ಬದಿಯಲ್ಲಿ ಕೆಲ ಯುವಕರು ನಮಾಝ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ನಮಾಝ್ ನಿರ್ವಹಿಸಿದ್ದಕ್ಕೆ ಸಂಘಪರಿವಾರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೆ ಪೊಲೀಸರು ಸುಮೋಟೊ ಪ್ರಕರಣ (ಐಪಿಸಿ ಸೆಕ್ಷನ್ 341, 283, 143 ಜೊತೆಗೆ 149 ಸೆಕ್ಷನ್) ದಾಖಲಿಸಿಕೊಂಡಿದ್ದರು. ಪೊಲೀಸರ ಕ್ರಮಕ್ಕೆ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು.
ಮೇ 29ರಂದು ಕಾಂಗ್ರೆಸ್ ಮುಖಂಡ ಕೆ ಕೆ ಶಾಹುಲ್ ಹಮೀದ್ ನೇತೃತ್ವದ ಮುಸ್ಲಿಂ ನಾಯಕರ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಕೇಸ್ ವಾಪಸ್ ಪಡೆಯುವಂತೆ ಆಗ್ರಹಿಸಿದ್ದರು. ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದರು. ಎಸ್‌ಡಿಪಿಐ ಪಕ್ಷ ಇಂದು (ಮೇ 31) ಶುಕ್ರವಾರ ಪ್ರತಿಭಟನೆ ಕೂಡ ಹಮ್ಮಿಕೊಂಡಿತ್ತು.
ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸುಮೋಟೊ ಪ್ರಕರಣ ರದ್ದಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಪ್ರಕಟಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ “ರಸ್ತೆಯಲ್ಲಿ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಕ್ಕೆ ಅಡೆತಡೆ ಮಾಡುವ ಯಾವುದೇ ಉದ್ದೇಶ ಇಲ್ಲದಿರುವುದರಿಂದ ಸದ್ರಿ ಪ್ರಕರಣದಲ್ಲಿ ‘ಬಿ’ ಅಂತಿಮ ವರದಿ ಸಲ್ಲಿಸಲಾಗಿದೆ ಮತ್ತು ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿಯನ್ನು ನೀಡದೆ ಸುಮೋಟೊ ಪ್ರಕರಣ ದಾಖಲಿಸಿದ ಕದ್ರಿ ಪೊಲೀಸ್ ನಿರೀಕ್ಷಕರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿ, ಎಸಿಪಿ ದರ್ಜೆಯ ಅಧಿಕಾರಿಯನ್ನು ವಿಚಾರಣೆಗೆ ನೇಮಕ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ಭಂಗ ಉಂಟು ಮಾಡುವ ಪೋಸ್ಟ್ ಹಾಕಿದ್ದ ಹಿಂದುತ್ವ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶರಣ್ ಪಂಪವೆಲ್ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
“ಮಂಗಳೂರಿನ ಕಂಕನಾಡಿ ಬಳಿ ಸಾರ್ವಜನಿಕರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲು ನಡೆಸಿರುವ ನಮಾಜಿನ ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಲಾಗಿದೆ. ಶುಕ್ರವಾರ ಮತ್ತೆ ಅದೇ ಜಾಗದಲ್ಲಿ ನಮಾಝ್ ನಡೆದರೆ ನೇರವಾಗಿ ಬಜರಂಗದಳ ಇದರ ವಿರುದ್ಧ ನೇರ ಕಾರ್ಯಾಚರಣೆ ನಡೆಸಿ ನಿಲ್ಲಿಸಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ” ಎಂಬ ಬರವಣಿಗೆಯೊಂದಿಗೆ ಶರಣ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.
Mangaluru Police withdraw case over Namaz on road near Kankanady Masjid
The Mangaluru city police have withdrawn the suo-moto case filed in connection with a viral video showing individuals offering Namaz on a road near Kankanady Masjid on May 24.@zoo_bear @compolmlr pic.twitter.com/VzDmGIhTyi
— Irshad Venur ಇರ್ಷಾದ್ ವೇಣೂರು (@muhammadirshad6) May 30, 2024
“ಜನರಲ್ಲಿ ದ್ವೇಷ ಭಾವನೆ ಉಂಟಾಗುವಂತೆ ಹಾಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಬೆದರಿಕೆ ಹಾಕಿ ಎಚ್ಚರಿಕೆಯನ್ನು ನೀಡಿ ಸಮಾಜದಲ್ಲಿ ಭಯವನ್ನುಂಟು ಮಾಡುವ ರೀತಿಯಲ್ಲಿ ಪೋಸ್ಟ್ ಅನ್ನು ಮಾಡಿದ್ದಾಗಿದೆ. ಈ ಬಗ್ಗೆ ಮಂಗಳೂರು ನಗರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಕರಣವು ದಾಖಲಾಗಿರುತ್ತದೆ” ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಬಂಧನ: ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಎಸ್‌ಐಟಿ ಅಧಿಕಾರಿಗಳು


