ಮೇ 28ರಂದು ಜಾರ್ಖಂಡ್‌ನ ದುಮ್ಕಾದಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, “ನಮ್ಮ ದೇಶದಲ್ಲಿ ಭಾನುವಾರ ವಾರದ ರಜೆ ಇದೆ. ಬ್ರಿಟಿಷರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ಕ್ರಿಶ್ಚಿಯನ್ ಸಮುದಾಯದವರು ರಜಾದಿನವನ್ನು ಹೊಂದಿದ್ದರು. ಈ ಸಂಪ್ರದಾಯ ಅಂದಿನಿಂದ ಪ್ರಾರಂಭವಾಯಿತು. ಭಾನುವಾರದ ರಜೆಗೂ ಹಿಂದೂಗಳಿಗೂ ಸಂಬಂಧವಿಲ್ಲ. ಕಳೆದ 200-300 ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. ಈಗ ಜಾರ್ಖಂಡ್‌ನ ಒಂದು ಜಿಲ್ಲೆಯಲ್ಲಿ ಭಾನುವಾರದ ಬದಲು, ಶುಕ್ರವಾರ ಅಧಿಕೃತ ರಜೆ ನೀಡಲಾಗುತ್ತಿದೆ” ಎಂದು ಹೇಳಿದ್ದರು.
ಪ್ರಧಾನಿ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾದ ಭಾಷಣದ ವಿಡಿಯೋದಲ್ಲಿ 34 ನಿಮಿಷ 55 ಸೆಕೆಂಡ್‌ನಿಂದ ಮೇಲಿನ ಮಾತುಗಳನ್ನು ಆಲಿಸಬಹುದು.

ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ತನ್ನ ಭಾಷಣದಲ್ಲಿ ಹೇಳಿರುವುದು ಸುಳ್ಳು. ಭಾರತದಲ್ಲಿ ಸಮಾಜ ಸುಧಾರಕ, ಹೋರಾಟಗಾರ ನಾರಾಯಣ್ ಮೇಘಾಜಿ ಲೋಖಂಡೆ ಅವರ ಪ್ರಯತ್ನದ ಫಲವಾಗಿ ಮೊದಲ ‘ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಷನ್‘ 1890ರಲ್ಲಿ ಎಲ್ಲಾ ಕಾರ್ಮಿಕರಿಗೆ ಭಾನುವಾರದ ರಜಾದಿನವನ್ನು ಘೋಷಿಸಿತು.

ಭಾರತದಲ್ಲಿದ್ದ ಬ್ರಿಟಿಷರು ಚರ್ಚ್‌ಗೆ ತೆರಳಲು ಮತ್ತು ವಾರಾಂತ್ಯದಲ್ಲಿ ಬಿಡುವು ಮಾಡಿಕೊಳ್ಳಲು ಭಾನುವಾರದ ದಿನ ರಜೆಯನ್ನು ಹೊಂದಿದ್ದರು. ಆದರೆ, ಭಾರತದ ಕಾರ್ಮಿಕರಿಗೆ ಮಾತ್ರ ಯಾವುದೇ ರೀತಿಯ ವಾರದ ರಜೆ ಇರಲಿಲ್ಲ. ಭಾರತದ ಕಾರ್ಮಿಕರು ವಾರದ 7 ದಿನವೂ ಕೂಡ ದುಡಿಯಲೇ ಬೇಕಾಗಿತ್ತು. ಹೀಗಾಗಿ, ಮೊದಲು ಮುಂಬೈನ ಹತ್ತಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ್ ಮೇಘಾಜಿ ಲೋಖಂಡೆ ಅವರು 1880ರಲ್ಲಿ ತಮ್ಮ ಕೆಲಸವನ್ನು ತೊರೆದಿದ್ದರು.
ಬಳಿಕ ಮರಾಠಿಯ ದೀನ ಬಂಧು ಪತ್ರಿಕೆಯ ಕಾರ್ಯನಿರ್ವಹಣೆಯನ್ನು ನೋಡಿಕೊಂಡಿದ್ದ ಅವರು, ದೇಶದ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ‘ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಷನ್’ ಎಂದು ಕರೆಯಲ್ಪಡುವ ಭಾರತದಲ್ಲಿ ಮೊದಲ ಕಾರ್ಮಿಕ ಸಂಘವನ್ನು ಪ್ರಾರಂಭಿಸಿದರು. ಈ ಸಂಘಟನೆಯ ಮೂಲಕ ಭಾನುವಾರ ಭಾರತದ ಕಾರ್ಮಿಕರಿಗೆ ರಜೆ ಘೋಷಣೆ ಮಾಡಲು ಹೆಚ್ಚು ಪ್ರಚಾರ ಮಾಡಲಾಯಿತು.
ಜೂನ್ 10,1890ರಲ್ಲಿ ಬಾಂಬೆಯ ರೇಸ್ ಕೋರ್ಸ್ ಮೈದಾನದಲ್ಲಿ 10 ಸಾವಿರ ಕಾರ್ಮಿಕರು ಪ್ರತಿಭಟನೆ ನಡೆಸಿ ಮುಷ್ಕರವನ್ನು ಘೋಷಿಸಿದ ನಂತರ, ಗಿರಣಿ ಮಾಲೀಕರ ಸಂಘವು ಅಂತಿಮವಾಗಿ ಶರಣಾಯಿತು ಮತ್ತು 1890 ರಲ್ಲಿ ಕಾರ್ಮಿಕರಿಗೆ ಭಾನುವಾರ ರಜಾದಿನವನ್ನು ಘೋಷಿಸಿತು.

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಜನಿಸಿದ ಸಮಾಜ ಸುಧಾರಕ ಮತ್ತು ಹೋರಾಟಗಾರ ಲೋಖಂಡೆ ಅವರು ‘ಭಾರತದ ಟ್ರೇಡ್ ಯೂನಿಯನ್ ಚಳವಳಿಯ ಪಿತಾಮಹ’ ಎಂದು ಪ್ರಶಂಸಿಸಲ್ಪಟ್ಟರು.
1997ರಲ್ಲಿ ಪ್ರಕಟವಾದ ನಳಿನಿ ಪಂಡಿತ್ ಅವರ ‘ನಾರಾಯಣ ಮೇಘಾಜಿ ಲೋಖಂಡೆ: ದಿ ಫಾದರ್ ಆಫ್ ಟ್ರೇಡ್ ಯೂನಿಯನ್ ಮೂವ್ಮೆಂಟ್ ಇನ್ ಇಂಡಿಯಾ’ ಎಂಬ ಜರ್ನಲ್ ಲೇಖನದಲ್ಲಿ ಈ ಕುರಿತು ಮಾಹಿತಿಯಿದೆ.
ಲೋಖಂಡೆಯವರ ಪ್ರಯತ್ನದಿಂದ ಭಾನುವಾರದ ರಜೆ ಮಾತ್ರವಲ್ಲದೆ, ಕಾರ್ಮಿಕ ವಲಯದಲ್ಲಿ ಇತರ ಹಲವು ಬದಲಾವಣೆಯೂ ಅಯಿತು. ಅವುಗಳು ಹೀಗಿವೆ…
- ಗಿರಣಿ ಕಾರ್ಮಿಕರಿಗೆ ಭಾನುವಾರ ವಾರದ ರಜೆ
- ಕೆಲಸಗಾರರಿಗೆ ಮಧ್ಯಾಹ್ನದ ಅರ್ಧ ಗಂಟೆಯ ವಿರಾಮ
- ಬೆಳಿಗ್ಗೆ 6:30ಕ್ಕೆ ಕೆಲಸ ಪ್ರಾರಂಭಿಸಿ, ಸೂರ್ಯಾಸ್ತದ ಹೊತ್ತಿಗೆ ಕೊನೆಗೊಳಿಸುವುದು
- ಕಾರ್ಮಿಕರಿಗೆ ಪ್ರತಿ ತಿಂಗಳು 15ನೇ ತಾರೀಖಿನೊಳಗೆ ವೇತನ ನೀಡುವುದು

‘ಎನ್.ಎಂ ಲೋಖಂಡೆ ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಲೇಬರ್ ಸ್ಟಡೀಸ್’ ಅನ್ನು 7 ಜುಲೈ 1947 ರಂದು ಭಾರತದ ಮಾಜಿ ಹಂಗಾಮಿ ಪ್ರಧಾನ ಮಂತ್ರಿ ಮತ್ತು ಬಾಂಬೆ ಪ್ರಾಂತ್ಯದ ಕಾರ್ಮಿಕ ಸಚಿವ ಗುಲ್ಜಾರಿಲಾಲ್ ನಂದಾ ಅವರು ಸ್ಥಾಪಿಸಿದರು.
ಈ ಕಾಲೇಜಿನ ಅಧಿಕೃತ ವೆಬ್‌ಸೈಟ್ ಕೂಡ 1890 ರಲ್ಲಿ ಭಾನುವಾರವನ್ನು ರಜಾದಿನವಾಗಿ ಘೋಷಿಸಿದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಇದನ್ನೂ ಓದಿ : FACT CHECK : ರಾಹುಲ್ ಗಾಂಧಿಯ ಹಿಂಬದಿ ಇರುವ ಫೋಟೋ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ್ದಲ್ಲ


