ಸಚಿವ ಎಂ.ಬಿ ಪಾಟೀಲ್ ಅವರು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಹಳೆಯ ಪತ್ರವೊಂದು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಪತ್ರವನ್ನು ಬಿಜಾಪುರ ಲಿಂಗಾಯ ಜಿಲ್ಲಾ ಶಿಕ್ಷಣ ಸಂಘಟನೆ (ಬಿಎಲ್‌ಡಿಇಎ) ಲೆಟರ್ ಹೆಡ್‌ನಲ್ಲಿ ಸಿದ್ದಪಡಿಸಲಾಗಿದೆ. ಈ ಸಂಸ್ಥೆಗೆ ಸಚಿವ ಎಂ.ಬಿ ಪಾಟೀಲ್ ಅವರೇ ಅಧ್ಯಕ್ಷರಾಗಿದ್ದಾರೆ.
“ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್ ಸಹಾಯದಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ‘ಹಿಂದೂಗಳನ್ನು ವಿಭಜಿಸಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಒಗ್ಗೂಡಿಸಲು’ ಯೋಜಿಸುತ್ತಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
ಮೇ 29,2024 ರಂದು ಎಕ್ಸ್‌ನಲ್ಲಿ ಈ ಪತ್ರವನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು,”ಸೂಕ್ಷ್ಮವಾಗಿ ಗಮನಿಸಿ, ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆ ಇದು. ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಚಿವ ಎಂ.ಬಿ ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಬಿಜೆಪಿಯನ್ನು ಮಣಿಸಲು ಹಿಂದೂಗಳನ್ನು ವಿಭಜಿಸಬೇಕು ಎಂದು ಹೇಳಿದ್ದಾರೆ. ಇದಕ್ಕಾಗಿ ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್ ನೆರವು ಪಡೆಯುವುದಾಗಿ ತಿಳಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಹಲವು ಎಕ್ಸ್ ಬಳಕೆದಾರರು ಈ ಹಳೆಯ ಪತ್ರವನ್ನು ಹಂಚಿಕೊಂಡು ಇದೇ ರೀತಿ ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪತ್ರ 2019ರಲ್ಲಿಯೂ ವೈರಲ್ ಆಗಿದ್ದ ನಕಲಿ ಪತ್ರವಾಗಿದೆ. ಅದರಲ್ಲಿ ಉಲ್ಲೇಖಿಸಲಾದ ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್ ಎಂಬ ಸಂಸ್ಥೆಗಳೇ ಅಸ್ತಿತ್ವದಲ್ಲಿಲ್ಲ.
ಈ ಹಿಂದೆ ಪತ್ರ ವೈರಲ್ ಆದಾಗ, ಇದು ನಕಲಿ ಪತ್ರ ಎಂದು ಸಾಬೀತುಪಡಿಸಲು ಎಂ.ಬಿ ಪಾಟೀಲ್ ಅವರು ವೈರಲ್ ಆಗಿರುವ ಪತ್ರ ಹಾಗೂ ಬಿಎಲ್‌ಡಿಇಎ ಸಂಸ್ಥೆಯ ಅಸಲಿ ಲೆಟರ್ ಹೆಡ್ ಅನ್ನು ತಮ್ಮ ಎಕ್ಸ್ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಜೊತೆಯಲ್ಲೇ ಪೊಲೀಸರಿಗೆ ದೂರು ನೀಡಿರುವ ಪತ್ರವನ್ನೂ ಪ್ರಕಟಿಸಿದ್ದರು. ಅಲ್ಲದೆ ಈ ಕುರಿತು ಒಂದಿಷ್ಟು ವಿವರಣೆಯನ್ನೂ ಬರೆದುಕೊಂಡಿದ್ದರು. ಎಂ. ಬಿ ಪಾಟೀಲ್ ನೀಡಿದ್ದ ಮಾಹಿತಿ ಇಂತಿದೆ:
“ಈ ಪತ್ರ ನಕಲಿ. ಈ ಕುರಿತಾಗಿ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಕಲಿ ಪತ್ರ ತಯಾರಿಸಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದು ಬಿಜೆಪಿಯ ಹತಾಷೆಯನ್ನು ತೋರಿಸುತ್ತದೆ. ಅವರು ಈ ರೀತಿಯ ನಕಲಿ ಪತ್ರದ ಮೇಲೆ ಅವಲಂಬಿತರಾಗಿದ್ದಾರೆ. ಏಕೆಂದರೆ ಅವರು ಜನ ಬೆಂಬಲ ಕಳೆದುಕೊಂಡಿದ್ದಾರೆ” ಎಂದು ಎಂ.ಬಿ ಪಾಟೀಲ್ ಬರೆದುಕೊಂಡಿದ್ದರು. ಈ ಕುರಿತಾಗಿ ಸುದ್ದಿಗೋಷ್ಠಿಯನ್ನೂ ಕರೆದಿದ್ದ ಎಂ.ಬಿ ಪಾಟೀಲ್, ವೈರಲ್ ಆಗಿರುವ ಪತ್ರ ನಕಲಿ ಎಂದು ಸ್ಪಷ್ಟನೆ ನೀಡಿದ್ದರು.

ಕರ್ನಾಟಕ ಕಾಂಗ್ರೆಸ್ ಕೂಡಾ ಎಂ. ಬಿ ಪಾಟೀಲ್ ಅವರ ಸುದ್ದಿಗೋಷ್ಠಿಯ ವಿಡಿಯೋವನ್ನು 2019ರ ಏಪ್ರಿಲ್ 16 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು. ಜೊತೆಯಲ್ಲೇ ವಿವರಣೆಯನ್ನೂ ನೀಡಿತ್ತು. “ಇದೊಂದು ನಕಲಿ ಪತ್ರ. ಈ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾರ್ಕಿಕ ಕಾನೂನು ಅಂತ್ಯ ಸಿಗುವಂತೆ ನೋಡಿಕೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಬೇಕಿದ್ದರೆ ಸುಪ್ರೀಂ ಕೋರ್ಟ್‌ಗೂ ಹೋಗಲಾಗುವುದು” ಎಂದು ಎಂ.ಬಿ ಪಾಟೀಲರು ಹೇಳಿರುವುದಾಗಿ ತಿಳಿಸಿತ್ತು.

ಅಚ್ಚರಿಯ ವಿಷಯ ಎಂದರೆ 2019ರಲ್ಲಿ ಕರ್ನಾಟಕ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ನಕಲಿ ಪತ್ರ ಪ್ರಕಟಿಸಿತ್ತು. ಈ ಪತ್ರದ ಜೊತೆ ‘ಕಾಂಗ್ರೆಸ್‌ನ ಬಣ್ಣ ಬಯಲು’ ಎಂದು ಬರೆದುಕೊಂಡಿತ್ತು. ಆ ಪೋಸ್ಟ್ ಇಂದಿಗೂ ಹಾಗೆಯೇ ಇದೆ!.

ಎನ್‌ಡಿಟಿವಿ ವರದಿ ಪ್ರಕಾರ ಈ ಪ್ರಕರಣ ಸಂಬಂಧ ಪೋಸ್ಟ್ ಕಾರ್ಡ್ ನ್ಯೂಸ್ ಸಹ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆಯನ್ನು 2019ರಲ್ಲಿ ಪೊಲೀಸರು ಬಂಧಿಸಿದ್ದರು. ಆತನ ವಿರುದ್ದ ಸುಳ್ಳು ಸುದ್ದಿ ಹರಡಿದ ಆರೋಪ ಹೊರಿಸಲಾಗಿತ್ತು. ನಕಲಿ ಪತ್ರಕ್ಕೆ ಸಂಬಂಧಿಸಿದಂತೆ ಎಂ. ಬಿ ಪಾಟೀಲ್ ಅವರು ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಒಟ್ಟಿನಲ್ಲಿ ಹೇಳುವುದಾದರೆ, ವೈರಲ್ ಆಗಿರುವ ಪತ್ರ 2019ರದ್ದು. ಇದು ನಕಲಿ ಎಂದು ಸ್ವತಃ ಸಚಿವ ಎಂ.ಬಿ ಪಾಟೀಲ್ ಅವರು ಆಗಲೇ ದಾಖಲೆ ಸಹಿತ ಸ್ಪಷ್ಟನೆ ನೀಡಿದ್ದರು. ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಪೋಸ್ಟ್ ಕಾರ್ಡ್‌ನ ಮಹೇಶ್ ವಿಕ್ರಮ್ ಹೆಗ್ಡೆಯ ಬಂಧನವೂ ಆಗಿತ್ತು. ಇತ್ತೀಚೆಗೆ ಹಳೆಯ ನಕಲಿ ಪತ್ರ ಮತ್ತೊಮ್ಮೆ ವೈರಲ್ ಆಗಿದೆ.
ಇದನ್ನೂ ಓದಿ : FACT CHECK : ಕ್ರೈಸ್ತರಿಂದ ಭಾರತಕ್ಕೆ ಭಾನುವಾರ ರಜಾ ದಿನ ಬಂತು ಎಂಬ ಪ್ರಧಾನಿ ಮೋದಿ ಹೇಳಿಕೆ ಸುಳ್ಳು


