ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರವಾಗಿರುವ ಅಯೋಧ್ಯೆಯ ರಾಮಮಂದಿರ ಇರುವ ಉತ್ತರ ಪ್ರದೇಶದ ಫೈಝಾಬಾದ್ ಲೋಕಸಭೆ ಕ್ಷೇತ್ರದಲ್ಲೇ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ
ಚುನಾವಣಾ ಆಯೋಗದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಸಂಜೆ 6:30ರ ಹೊತ್ತಿಗೆ ಸಮಾಜವಾದಿ ಪಕ್ಷ (ಎಸ್‌ಪಿ)ದ ಅಭ್ಯರ್ಥಿ ಅವಧೇಶ್ ಪ್ರಸಾದ್ ಅವರು ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ವಿರುದ್ಧ ಸುಮಾರು 55 ಸಾವಿರ ಮತಗಳ ಅಂತರದಿಂದ ಮುನ್ನಡೆ ದಾಖಲಿಸಿದ್ದರು.
ಮತ ಎಣಿಕೆಯ ಆರಂಭದಿಂದಲೂ ಹಿನ್ನಡೆ ಅನುಭವಿಸಿದ್ದ ಲಲ್ಲು ಸಿಂಗ್ 5 ಲಕ್ಷದಷ್ಟು ಮತಗಳನ್ನು ಪಡೆದರೆ, ಅವಧೇಶ್ ಪ್ರಸಾದ್ 5 ಲಕ್ಷದ 54 ಸಾವಿರದಷ್ಟು ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಗೆಲುವನ್ನು ಖಚಿತಪಡಿಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಬಿಜೆಪಿ ರಾಮ ಮಂದಿರವನ್ನು ಚುನಾವಣಾ ಅಸ್ತ್ರವನ್ನಾಗಿಸಿದೆ. ಬಿಜೆಪಿ ಭರವಸೆ ಕೊಟ್ಟಂತೆ ವರ್ಷದ ಹಿಂದೆ ರಾಮ ಮಂದಿರ ನಿರ್ಮಾಣವೂ ಆಗಿದೆ. ಹಾಗಾಗಿ, ಇಡೀ ದೇಶದ ಚುನಾವಣಾ ಪ್ರಕ್ರಿಯೆಯ ಮೇಲೆ ರಾಮ ಮಂದಿರ ಪ್ರಭಾವ ಬೀರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಾಮಮಂದಿರ ಇರುವ ಫೈಝಾಬಾದ್ ಕ್ಷೇತ್ರದಲ್ಲೇ ಬಿಜೆಪಿಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ: ಲೋಕಸಭೆ ಫಲಿತಾಂಶ: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಹೀನಾಯ ಸೋಲು


