ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ, ಇದೀಗ ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಗರಿಗೆದರಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ಆರಂಭಿಸಿವೆ.
ಇದು ನವದೆಹಲಿಯಲ್ಲಿ ಎರಡೂ ಒಕ್ಕೂಟಗಳ ಮಹತ್ವದ ಸಭೆ ನಡೆಯಲಿದೆ. ಬಿಜೆಪಿ ಬಹುಮತ ದಾಟದಿದ್ದರೂ, ಎನ್‌ಡಿಎ ಒಕ್ಕೂಟ ಬಹುಮತ ಪಡೆದಿರುವ ಹಿನ್ನೆಲೆ ಎನ್‌ಡಿಎಗೆ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಆದರೆ, ಮೈತ್ರಿ ಪಕ್ಷಗಳನ್ನು ಹಿಡಿದಿಟ್ಟುಕೊಳ್ಳುವುದು ಬಿಜೆಪಿ ಸವಾಲಾಗಿದೆ.
ಇತ್ತ, ಬಹುಮತಕ್ಕೆ ಸುಮಾರು 40 ಸ್ಥಾನಗಳ ಕೊರತೆ ಇದ್ದರೂ, ಶತಾಯಗತಾಯ ಸರ್ಕಾರ ರಚನೆ ಮಾಡಿಯೇ ತೀರುತ್ತೇವೆ ಎಂಬ ಹುಮ್ಮಸ್ಸಿನಲ್ಲಿರುವ ಇಂಡಿಯಾ ಒಕ್ಕೂಟ, ಹಳೆಯ ಮಿತ್ರರಾದ ಜೆಡಿಯು ಮತ್ತು ಟಿಡಿಪಿಯನ್ನು ತನ್ನತ್ತ ಸೆಳೆಯಲು ಗಾಳ ಹಾಕಿದೆ.
ಒಟ್ಟು 543 ಲೋಕಸಭೆ ಸ್ಥಾನಗಳ ಪೈಕಿ ಎನ್‌ಡಿಎ ಒಕ್ಕೂಟ 294 ಸ್ಥಾನಗಳನ್ನು ಪಡೆದು 272ರ ಮ್ಯಾಜಿಕ್ ನಂಬರ್‌ಗಿಂತ 22 ಹೆಚ್ಚುವರಿ ಸ್ಥಾನಗಳನ್ನ ಪಡೆದಿದೆ. ಇಂಡಿಯಾ ಒಕ್ಕೂಟ 234 ಸ್ಥಾನಗಳನ್ನು ಪಡೆದಿದ್ದು, ಬಹುಮತಕ್ಕೆ 38 ಸ್ಥಾನಗಳ ಕೊರತೆ ಇದೆ. ಇದನ್ನು ತುಂಬಲು ಹಳೆಯ ಮಿತ್ರರಾದ ಜೆಡಿಯುನ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡುವನ್ನು ಮನವೊಲಿಸಲು ಇಂಡಿಯಾ ನಾಯಕರು ಕಸರತ್ತು ಆರಂಭಿಸಿದ್ದಾರೆ.
ಇಂದಿನ ಸಭೆಯಲ್ಲಿ ಏನು ಬೆಳವಣಿಗೆ ನಡೆಯಲಿದೆ ಎಂಬುವುದು ಕುತೂಹಲ ಮೂಡಿಸಿದೆ. ಎರಡೂ ಒಕ್ಕೂಟಗಳ ಸಭೆಯತ್ತ ಇಡೀ ದೇಶದ ಚಿತ್ತ ನೆಟ್ಟಿದೆ.
ನಿನ್ನೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಇಂಡಿಯಾ ಒಕ್ಕೂಟದ ಪಾಲುದಾರರೊಂದಿಗೆ ಮಾತನಾಡಿದ ಬಳಿಕವಷ್ಟೇ ಟಿಡಿಪಿ ಮತ್ತು ಜೆಡಿಯು ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉತ್ತರಿಸುತ್ತೇನೆ” ಎಂದಿದ್ದಾರೆ.
ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಬಂದರೂ, ಬಿಜೆಪಿಗೆ ಬಹುಮತ ಬಂದಿಲ್ಲ. ಆದ್ದರಿಂದ ಬಿಜೆಪಿ ಈ ಬಾರಿ ತನ್ನ ಮೈತ್ರಿಕೂಟದ ಪಕ್ಷಗಳ ನಿರ್ಧಾರಕ್ಕೆ ತಲೆ ಬಾಗುವ ಅನಿವಾರ್ಯತೆ ಎದುರಾಗಿದೆ. ಮತ್ತೊಂದೆಡೆ ತನ್ನ ಮಿತ್ರ ಪಕ್ಷಗಳು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳುವ ಸಂಕಷ್ಟಕ್ಕೆ ಸಿಲುಕಿದೆ.
ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ ನಿತೀಶ್ ಕುಮಾರ್-ತೇಜಸ್ವಿ ಯಾದವ್
2024 चुनाव के नतीजे सामने आने के बाद बिहार में सियासत तेज हो गई है. बिहार CM नीतीश कुमार और RJD नेता तेजस्वी यादव एक ही फ्लाइट से दिल्ली आ रहे हैं. इस दौरान CM नीतीश कुमार ने तेजस्वी का हालचाल जाना और RJD नेता ने भी बिहार CM का अभिवादन किया. देखिए वीडियो…#NitishKumar #JDU… pic.twitter.com/lTpRQXcWAQ
— ABP News (@ABPNews) June 5, 2024
ಎನ್‌ಡಿಎ ಮೈತ್ರಿಕೂಟದ ನಾಯಕ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕ ಹಾಗೂ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಇದರಿಂದ ಇಂದಿನ ಮೈತ್ರಿಕೂಟಗಳ ಸಭೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಮೋದಿ ನೇತೃತ್ವದ ಎನ್‌ಡಿಎಗೆ ಬೆಂಬಲಿಸಬೇಡಿ: ನಿತೀಶ್, ನಾಯ್ಡುಗೆ ಮಮತಾ ಬ್ಯಾನರ್ಜಿ ಮನವೊಲಿಸಲು ಪ್ರಯತ್ನ


