ಸರ್ಕಾರ ರಚನೆಯ ಕಾರ್ಯತಂತ್ರ ರೂಪಿಸಲು ಇಂಡಿಯಾ ಮೈತ್ರಿಕೂಟದ ನಾಯಕರು ಇಂದು (ಜೂನ್ 5) ಸಂಜೆ 6 ಗಂಟೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ಮನೆಯಲ್ಲಿ ಸಭೆ ಸೇರಲಿದ್ದಾರೆ.
ಸರ್ಕಾರ ರಚಿಸಲು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆಯೂ ನಾಯಕರು ಪರಾಮರ್ಷೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜೊತೆಗೆ ಶರದ್ ಪವಾರ್, ಎಂಕೆ ಸ್ಟಾಲಿನ್, ಚಂಪೈ ಸೊರೆನ್, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಸೀತಾರಾಮ್ ಯೆಚೂರಿ ಮತ್ತು ಡಿ ರಾಜಾ ಸೇರಿದಂತೆ ಪ್ರತಿ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸುವುದಿಲ್ಲ. ಇವರ ಬದಲಾಗಿ ಶಿವಸೇನಾ (ಯುಬಿಟಿ)ಯ ಪ್ರತಿನಿಧಿ ಮತ್ತು ಟಿಎಂಸಿ ಪರವಾಗಿ ಅಭಿಷೇಕ್ ಬ್ಯಾನರ್ಜಿ ಇರಲಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕಿ ಮತ್ತು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ತಿಳಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸಭೆಗೂ ಮೊದಲು, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು “ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧರಿದ್ದರೆ ಪಕ್ಷವು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸಲಿದೆ” ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ “ಸರ್ಕಾರ ರಚಿಸುವ ಕಾಂಗ್ರೆಸ್‌ನ ಪ್ರಯತ್ನ ನಡೆಯುವುದಿಲ್ಲ. ಇಂದು ದೆಹಲಿಯಲ್ಲಿ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಜೆಡಿ(ಎಸ್) ಪರವಾಗಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಇಂಡಿಯಾ ಒಕ್ಕೂಟದ ಪಕ್ಷಗಳೊಂದಿಗೆ ಚರ್ಚಿಸಿದ ಬಳಿಕವಷ್ಟೇ ಸರ್ಕಾರ ರಚನೆಯ ಭಾಗವಾಗಿ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗುವ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ.
ಇದನ್ನೂ ಓದಿ : ಎಂಪಿ ಚುನಾವಣೆಯಲ್ಲಿ ಗೆದ್ದ ಜೈಲಿನಲ್ಲಿರುವ ಇಬ್ಬರು ಅಭ್ಯರ್ಥಿಗಳು; ಪ್ರಮಾಣ ವಚನ ಸ್ವೀಕರಿಸುವುದು ಹೇಗೆ?


