ಚಿಕ್ಕೋಡಿಯ ಪ್ರಿಯಾಂಕಾ ಜಾರಕಿಹೊಳಿ, ದಾವಣೆಗೆಯಲ್ಲಿ ಪ್ರಭಾ ಮಲ್ಲಿಕಾರ್ಜುನ, ಬೆಂಗಳೂರು ಉತ್ತರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ, ಕಾಂಗ್ರೆಸ್‌ನ ಕುಮಾರಿ ಸೆಲ್ಜಾ, ಬಿಜೆಪಿಯ ಕಂಗನಾ ರನೌತ್ ಮತ್ತು ಹೇಮಾ ಮಾಲಿನಿ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಮತ್ತು ಆರ್‌ಜೆಡಿಯ ಮಿಸಾ ಭಾರತಿ ಸೇರಿದಂತೆ 73 ಜನ ಮಹಿಳಾ ಅಭ್ಯರ್ಥಿಗಳು ದೇಶದಾದ್ಯಂತ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಅಮೇಥಿಯ ಹಾಲಿ ಸಂಸದೆ ಸ್ಮೃತಿ ಇರಾನಿ ಮತ್ತು ಸುಲ್ತಾನ್‌ಪುರ ಸಂಸದೆ ಮೇನಕಾ ಗಾಂಧಿ ಸೋತ ಸಂಸದರ ಪಟ್ಟಿಗೆ ಸೇರಿದ್ದಾರೆ.
ಹರಿಯಾಣದ ಸಿರ್ಸಾ ಲೋಕಸಭಾ ಕ್ಷೇತ್ರದಲ್ಲಿ ಸೆಲ್ಜಾ 2.5 ಲಕ್ಷ ಮತಗಳಿಂದ ಗೆದ್ದರೆ, ಬಿಜೆಪಿಯ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ 78,370 ಮತಗಳಿಂದ ನವದೆಹಲಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಟ್ಟು 797 ಮಹಿಳೆಯರು ಸ್ಪರ್ಧಿಸಿದ್ದರು.
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮೊದಲ ಬಾರಿಗೆ ಸ್ಪರ್ಧಿಸಿರುವ ನಟಿ-ರಾಜಕಾರಣಿ ರನೌತ್ ಅವರು ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,755 ಮತಗಳಿಂದ ಗೆದ್ದಿದ್ದಾರೆ. ಮತ್ತೊಂದೆಡೆ ಹಿರಿಯ ನಟಿ, ಮಥುರಾದಿಂದ ಹಾಲಿ ಸಂಸದೆ ಹೇಮಾ ಮಾಲಿನಿ ಅವರು 5.1 ಲಕ್ಷ ಮತಗಳನ್ನು ಪಡೆಯುವ ಮೂಲಕ ಸ್ಥಾನವನ್ನು ಉಳಿಸಿಕೊಂಡರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಮೈನ್‌ಪುರಿಯ ಹಾಲಿ ಸಂಸದೆ ಡಿಂಪಲ್ ಯಾದವ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜಯವೀರ್ ಸಿಂಗ್ ವಿರುದ್ಧ 2,21,639 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಶಾ ಭಾರತಿ ಅವರು ಕೇಂದ್ರ ಸಚಿವ ಮತ್ತು ಬಿಹಾರದ ಪಾಟಲಿಪುತ್ರದ ಹಾಲಿ ಸಂಸದ ರಾಮ್ ಕೃಪಾಲ್ ಯಾದವ್ ವಿರುದ್ಧ 85,174 ಮತಗಳ ಅಂತರದಿಂದ ಗೆದ್ದಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಹುವಾ ಮೊಯಿತ್ರಾ 56,705 ಮತಗಳಿಂದ ಜಯಗಳಿಸಿದ್ದಾರೆ. ಡಿಎಂಕೆಯ ಕನಿಮೋಳಿ ಕರುಣಾನಿಧಿ ಅವರು 5,40,729 ಮತಗಳನ್ನು ಪಡೆಯುವ ಮೂಲಕ ತಮ್ಮ ತೂತುಕ್ಕುಡಿ ಕ್ಷೇತ್ರವನ್ನು ಕ್ಷೇತ್ರವಾರು ಉಳಿಸಿಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ಮಚ್ಲಿಶಹರ್‌ನ 25 ವರ್ಷದ ಅಭ್ಯರ್ಥಿ ಪ್ರಿಯಾ ಸರೋಜ್ ಮತ್ತು ಕೈರಾನಾ ಕ್ಷೇತ್ರದಿಂದ 29 ವರ್ಷದ ಇಕ್ರಾ ಚೌಧರಿ ಗೆಲುವು ಸಾಧಿಸಿದ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಇದುವರೆಗೆ 30ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಿಂದ ಗೆದ್ದಿದ್ದಾರೆ. 78 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದ 2019 ರ ಲೋಕಸಭೆ ಚುನಾವಣೆಗಿಂತ ಈ ಸಂಖ್ಯೆ ಕಡಿಮೆಯಾಗಿದೆ.
ಬೆಳಗ್ಗೆ 8 ಗಂಟೆಗೆ ಆರಂಭವಾದ 12 ಗಂಟೆಗಳ ಮತ ಎಣಿಕೆ ನಂತರ 543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಕಳೆದ ಬಾರಿ ಗಳಿಸಿದ್ದ 303 ಸಂಖ್ಯೆಯಿಂದ ಬಹಳ ದೂರವಿದೆ.
ಇದನ್ನೂ ಓದಿ; ಲೋಕಸಭೆ ಚುನಾವಣೆ ಫಲಿತಾಂಶ: ಮರಾಠವಾಡದಲ್ಲಿ ಸ್ಪರ್ಧಿಸಿದ್ದ ನಾಲ್ಕೂ ಕ್ಷೇತ್ರಗಳಲ್ಲಿ ಸೋತ ಬಿಜೆಪಿ


