ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಸೂಚಿಸಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಶರಣಾಗಿ 5 ಪುಟಗಳ ಡೆತ್ ನೋಟ್ ಬರೆದ ನಂತರ ಬೆಳಕಿಗೆ ಬಂದ ಬಹುಕೋಟಿ ಹಗರಣದಲ್ಲಿ ನಾಗೇಂದ್ರ ಅವರ ಹೆಸರು ಕೇಳಿಬಂದಿದೆ. ಡೆತ್‌ನೋಟ್‌ನಲ್ಲಿ ಚಂದ್ರಶೇಖರನ್ ತಮ್ಮ ಮೇಲಧಿಕಾರಿಗಳು ಮತ್ತು ಸಚಿವರ ಹೆಸರನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಎಸ್ಟಿ ಕಲ್ಯಾಣಕ್ಕಾಗಿ ಮೀಸಲಿರಿಸಲಾಗಿದ್ದ 187 ಕೋಟಿ ರೂ.ಗಳಲ್ಲಿ 90 ಕೋಟಿ ರೂ.ಗಳ ಹಣವನ್ನು ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಯೂನಿಯನ್ ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿದ ಸುದ್ದಿ ಹೊರಬಿದ್ದ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಕುರಿತು ಸಭೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಅವರು ನಾಗೇಂದ್ರ ಅವರನ್ನು ಕರೆಸಿ ರಾಜೀನಾಮೆ ಕೇಳಲು ಕಾರಣವಾದ ಸಂದರ್ಭಗಳನ್ನು ವಿವರಿಸಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕರೆ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸುವುದಾಗಿ ಉಭಯ ನಾಯಕರು ಭರವಸೆ ನೀಡಿದ ನಂತರವೇ ನಾಗೇಂದ್ರ ರಾಜೀನಾಮೆ ನೀಡಲು ಒಪ್ಪಿಕೊಂಡರು ಎಂದು ವರದಿಯಾಗಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 94.73 ಕೋಟಿ ಮೊತ್ತವನ್ನು ಯೂನಿಯನ್ ಬ್ಯಾಂಕ್‌ನ ವಸಂತನಗರ ಶಾಖೆಯಿಂದ ಎಂ.ಜಿ. ರಸ್ತೆಯ ಶಾಖೆಗೆ ವರ್ಗಾಯಿಸಲಾಗಿತ್ತು. ಅಲ್ಲಿಂದ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯ 18 ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಸೊಸೈಟಿಯ ಖಾತೆಗಳಿಂದ ಹೈದರಾಬಾದ್‌ನ ರತ್ನಾಕರ ಬ್ಯಾಂಕ್ ಲಿಮಿಟೆಡ್‌ಗೆ (ಆರ್‌ಬಿಎಲ್) ವರ್ಗಾಯಿಸಿ, ಅಲ್ಲಿಂದ ಹಣವನ್ನು ಡ್ರಾ ಮಾಡಿಕೊಳ್ಳಲಾಗಿತ್ತು ಎಂಬ ಆರೋಪ ಇದೆ.
ಈ ಅಕ್ರಮದ ತನಿಖೆಗೆ ಮನೀಷ್ ಖರ್ಬೀಕರ್ ನೇತೃತ್ವದಲ್ಲಿ ಸರಕಾರ ಎಸ್ಐಟಿ ತನಿಖೆಗೆ ಆದೇಶಿಸಿದೆ. ತನಿಖಾಧಿಕಾರಿಗಳು ಇದೀಗ ನಿಗಮದ ಅಧಿಕಾರಿಗಳನ್ನು ಹಾಗೂ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಅವರನ್ನು ಈಗಾಗಲೇ ಬಂಧಿಸಿದೆ.
ಸಚಿವ ನಾಗೇಂದ್ರ ರಾಜೀನಾಮೆ ಜೂ.6ರವರೆಗೆ ಗಡುವು ನೀಡಿರುವ ಬಿಜೆಪಿಗರು, ಇಂದು ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಪ್ರತಿಪಕ್ಷಗಳು ಈ ವಿಚಾರನ್ನು ದೊಡ್ಡದಾಗಿ ಮಾಡಿ ರಾಜಕೀಯ ಮಾಡುವ ಮೊದಲೇ ಸಿಎಂ ಮಹತ್ವದ ನಿರ್ಧಾರ ತೆಗೆದುಕೊಂಡು ಬಿ.ನಾಗೇಂದ್ರ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್‌ನಲ್ಲಿ ಹೆಸರಿಸಿದ್ದ ಇಬ್ಬರು ಆರೋಪಿಗಳ ಬಂಧನ


