ಉದ್ಯಮಿ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ‘ಪ್ರಿ ವೆಡ್ಡಿಂಗ್ ಕ್ರೂಸ್ ಪಾರ್ಟಿ’ (ವಿವಾಹ ಪೂರ್ವ ಕಾರ್ಯಕ್ರಮ) ವಿದೇಶಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜುಲೈ 12, 2024ರಂದು ಉದ್ಯಮಿ ವಿರೇನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಜೊತೆ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ವಿವಾಹ ನಡೆಯಲಿದೆ. ಅದಕ್ಕೂ ಮುನ್ನ ವಿವಿಧ ರೀತಿಯಲ್ಲಿ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ.
ಮೊದಲ ವಿವಾಹ ಪೂರ್ವ ಕಾರ್ಯಕ್ರಮ ಅಂಬಾನಿ ಕುಟುಂಬದ ಮೂಲ ಸ್ಥಳ ಗುಜರಾತ್‌ನ ಜಾಮಾನಗರದಲ್ಲಿ ಅದ್ದೂರಿಯಾಗಿನ ನಡೆದಿತ್ತು. ಇದಕ್ಕಾಗಿ ಭಾರತೀಯ ವಾಯುನೆಲೆಯ ಅತಿ ಸೂಕ್ಷ್ಮ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಿ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತೇ ಇದೆ.
ವರದಿಗಳ ಪ್ರಕಾರ, ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 1,200ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದರು. ಬೆಜ್ವೆಲ್ಡ್ ಆನೆಗಳು ಮತ್ತು ಅಮೆರಿಕನ್ ಗಾಯಕಿ ರಿಹಾನ್ನಾ ಅವರ ಪ್ರದರ್ಶನ ಸೇರಿದಂತೆ ವಿವಿಧ ರೀತಿಯಲ್ಲಿ ಈ ಕಾರ್ಯಕ್ರಮಕ್ಕೆ ಅಂಬಾನಿ ಸುಮಾರು 150 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ.
ಎರಡನೇ ಕಾರ್ಯಕ್ರಮ ‘ಕ್ರೂಸ್ ಪಾರ್ಟಿ’
ಜಾಮಾನಗರದಲ್ಲಿ ಒಂದು ವಿವಾಹ ಪೂರ್ವ ಕಾರ್ಯಕ್ರಮ ಮುಗಿಸಿದ್ದ ಅಂಬಾನಿ ಕುಟುಂಬ, ಮೆಡಿಟರೇನಿಯನ್ ಸಮುದ್ರದಲ್ಲಿ ಐಷರಾಮಿ ಕ್ರೂಸ್‌ನಲ್ಲಿ ಎರಡನೇ ಕಾರ್ಯಕ್ರಮ ಆಯೋಜಿಸಿತ್ತು. ಈ ಕ್ರೂಸ್ ವಿವಿಧ ದೇಶಗಳನ್ನು ಸುತ್ತಾಡಿದೆ.
ಇಟಲಿಯ ದ್ವೀಪ ಸಿಸಿಲಿಯ ರಾಜಧಾನಿಯಾದ ಪಲೆರ್ಮೊದಿಂದ ಫ್ರಾನ್ಸ್‌ನ ದಕ್ಷಿಣಕ್ಕೆ 4 ದಿನಗಳ ಕ್ರೂಸ್ ಪಾರ್ಟಿ ಆಯೋಜಿಸಲಾಗಿತ್ತು. ನಾಲ್ಕು ದಿನಗಳಲ್ಲಿ ರೋಮ್, ಪೋರ್ಟೊಫಿನೋ, ಜಿನೋವಾ ಮತ್ತು ಕೇನ್ಸ್‌ಗಳಲ್ಲಿ ಕ್ರೂಸ್ ಸಂಚರಿಸಿದೆ. ಅಲ್ಲಲ್ಲಿ ಕಡಲ ತೀರಗಳಲ್ಲಿ ಪಾರ್ಟಿ ನಡೆದಿದೆ.
ಮೇ 29ರಂದು ಪಲೆರ್ಮೊದಿಂದ ಹೊರಟ ಕ್ರೂಸ್, ಇಟಾಲಿಯನ್ ಬೇಸಿಗೆಯನ್ನು ಅನುಭವಿಸುವ ಗುರಿಯೊಂದಿಗೆ ‘ಲಾ ಡೊಲ್ಸ್ ವೀಟಾ’ ಎಂಬ ಶೀರ್ಷಿಕೆಯ ಪಾರ್ಟಿಗಾಗಿ ಜೂನ್ 1ರಂದು ಆಗ್ನೆಯ ಜಿನೋವಾದ ಪೋರ್ಟೊಫಿನೋ ಬಂದರಿಗೆ ತಲುಪಿತ್ತು.
ಪೋರ್ಟೊಫಿನೋದಲ್ಲಿ ನಡೆದ ಪಾರ್ಟಿಯ ವಿಡಿಯೋ ಎಲ್ಲೂ ಸೋರಿಕೆಯಾಗದಂತೆ ತಡೆಯಲು ಮೊಬೈಲ್ ಫೋನ್ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಆದರೂ, ಕೆಲವೊಂದು ವಿಡಿಯೋಗಳು ಸೋರಿಕೆಯಾಗಿವೆ. ಅದರ ಪ್ರಕಾರ, ಅಮೆರಿಕನ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಮತ್ತು ಗಾಯಕಿ ಕೇಟಿ ಪೆರ್ರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸುಮಾರು 800 ಜನರು ಇದರಲ್ಲಿ ಪಾಲ್ಗೊಂಡಿದ್ದರು.
ಕ್ರೂಸ್ ಪಾರ್ಟಿ ವಿರುದ್ದ ಆಕ್ರೋಶಗೊಂಡ ಸ್ಥಳೀಯ ಜನರು
ಅಂಬಾನಿ ಮಗನ ವಿವಾವ ಪೂರ್ವ ಕ್ರೂಸ್ ಪಾರ್ಟಿಯ ವಿರುದ್ದ ಪೋರ್ಟೊಫಿನೋದ ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಕಾರಣ, ಕ್ರೂಸ್ ಪಾರ್ಟಿಯ ದಿನ ಅಲ್ಲಿನ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಐಷಾರಾಮಿ ಪಾರ್ಟಿಗಾಗಿ ಪೋರ್ಟೊಫಿನೋ ಬಂದರಿಗೆ ಜನರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
TIMES (UK): “A cruise ship packed with the cream of Indian society for an opulent wedding party has prompted complaints to police after it pulled into the port of Genoa in Italy and pumped out loud music until dawn”.
The Indian media didn't report this story. pic.twitter.com/99p98B9ukL
— Advaid അദ്വൈത് (@Advaidism) June 5, 2024
ಪೋರ್ಟೊಫಿನೋದಲ್ಲಿ ಈ ಹಿಂದೆಯೂ ಹಲವಾರು ಶ್ರೀಮಂತರ ಮದುವೆಗಳು ನಡೆದಿವೆ. ಆದರೆ, ಜನರಿಗೆ ತೊಂದರೆ ಕೊಟ್ಟಿರಲಿಲ್ಲ. ಆಸ್ಟ್ರೇಲಿಯನ್ ಗಾಯಕ ಸಿಯಾ ಮತ್ತು ರಿಯಾಲಿಟಿ ಟಿವಿ ತಾರೆ ಕೌರ್ಟ್ನಿ ಕಾರ್ಡಶಿಯಾನ್ ಇದೇ ಸ್ಥಳದಲ್ಲಿ ಮದುವೆ ಮಾಡಿಕೊಂಡಿದ್ದರು. ಆದರೆ, ಸ್ಥಳೀಯ ಜನರಿಗೆ ಯಾವುದೇ ತೊಂದರೆಯಾಗಿರಲಿಲ್ಲ.
ವರದಿಗಳ ಪ್ರಕಾರ, ಪೋರ್ಟೊಫಿನೋದ ಕಾರ್ಯಕ್ರಮದ ಆಹಾರಕ್ಕಾಗಿ ಅಲ್ಲಿನ ಸ್ಥಳೀಯ 10ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿಗೆ 7 ಸಾವಿರ ಡಾಲರ್‌ನಿಂದ 10 ಸಾವಿರ ಅಮೆರಿಕನ್ ಡಾಲರ್ ನೀಡಲಾಗಿದೆ.
ಅಂಬಾನಿ ಮಗನ ವಿವಾಹ ಪೂರ್ವ ಕಾರ್ಯಕ್ರಮದ ಕುರಿತು ಪೋರ್ಟೊಫಿನೋದ ಸ್ಥಳೀಯರು ಮತ್ತು ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋರ್ಟೊಫಿನೋದಲ್ಲಿ ಇದುವರೆಗೆ ಹಲವಾರು ಸೆಲೆಬ್ರೆಟಿಗಳ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದಿವೆ. ಆದರೆ, ಇದುವರೆಗೆ ಯಾರೂ ಸ್ಥಳೀಯರಿಗೆ ತೊಂದರೆ ಕೊಟ್ಟಿಲ್ಲ. ಅಂಬಾನಿ ಕುಟುಂಬದ ಖಾಸಗಿ ಕಾರ್ಯಕ್ರಮಕ್ಕೆ ಇಡೀ ಪಟ್ಟಣವನ್ನು ಮುಚ್ಚಲಾಗಿತ್ತು. ಇದರಿಂದ ಜನರಿಗೆ ಬಹಳ ತೊಂದರೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಕ್ರೂಸ್ ಪಾರ್ಟಿಯಲ್ಲಿದ್ದವರು ನಡೆದುಕೊಂಡಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಜೂನ್ 2ರಂದು ಇಡೀ ರಾತ್ರಿ ಜೋರಾಗಿ ಮ್ಯೂಸಿಕ್ ಇಟ್ಟು, ಕುಣಿದು ಕುಪ್ಪಳಿಸುವ ಮೂಲಕ ಪಾರ್ಟಿಯಲ್ಲಿದ್ದವರು ಕಿರಿ ಕಿರಿ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.
‘tadkeshwari (@ladytadkeshwari) ಎಂಬ ಎಕ್ಸ್ ಬಳಕೆದಾರರೊಬ್ಬರು ಕಾರ್ಯಕ್ರಮದ ಕುರಿತ ಪತ್ರಿಕಾ ವರದಿಯನ್ನು ಹಂಚಿಕೊಂಡು “ಹಣದಿಂದ ಶಿಷ್ಟಾಚಾರ ಮತ್ತು ಗುಣನಡತೆಯನ್ನು ಖರೀದಿಸಲು ಸಾಧ್ಯವಿಲ್ಲ! ಶೇಮ್ ಶೇಮ್ ಶೇಮ್!” ಎಂದು ಬರೆದುಕೊಂಡಿದ್ದಾರೆ.
Money cannot buy manners and character!
Shame Shame Shame!#Ambani#AnantAmbani #RadhikaMerchant#MukeshAmbani #NitaAmbani pic.twitter.com/6keDfh3IoQ— tadkeshwari (@ladytadkeshwari) June 5, 2024
ಒಟ್ಟಿನಲ್ಲಿ, ವಿಭಿನ್ನವಾಗಿ ಐಷಾರಾಮಿ ಕ್ರೂಸ್ ಶಿಪ್‌ನಲ್ಲಿ ವಿವಾಹಪೂರ್ವ ಕಾರ್ಯಕ್ರಮ ಆಯೋಜಿಸಿದ್ದ ಅಂಬಾನಿ ಕುಟುಂಬ, ಸ್ಥಳೀಯರಿಗೆ ತೊಂದರೆ ಕೊಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದೆ.
ಇದನ್ನೂ ಓದಿ : ಲೋಕಸಭೆ ಪ್ರವೇಶಿಸಿದ ಮುಸ್ಲಿಂ ಸಂಸದರ ಸಂಖ್ಯೆಯಲ್ಲಿ ಇಳಿಕೆ: ಈ ಭಾರಿ ಎಷ್ಟು ಮುಸ್ಲಿಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ? ಡಿಟೇಲ್ಸ್…


