ಇಸ್ರೇಲ್ ಗಾಝಾದಲ್ಲಿ ನರಮೇಧವನ್ನು ಮುಂದುವರಿಸಿದ್ದು, ಗಾಝಾ ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಗೆ 27 ನಿರಾಶ್ರಿತರು ಬಲಿಯಾಗಿದ್ದಾರೆ. ಅಕ್ಟೋಬರ್ 7ರ ದಾಳಿಯಲ್ಲಿ ಭಾಗಿಯಾಗಿರುವ ಹಮಾಸ್ ಸಶಸ್ತ್ರದಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿದರೆ, ಅಮಾಯಕ ನಿರಾಶ್ರಿತರನ್ನು ಹತ್ಯೆ ಮಾಡಲಾಗಿದೆ ಎಂದು ಗಾಝಾ ಮಾಧ್ಯಮಗಳು ವರದಿ ಮಾಡಿದೆ.
ಮಧ್ಯ ಗಾಝಾದ ನುಸಿರಾತ್‌ನಲ್ಲಿರುವ ಯುಎನ್ ಶಾಲೆಯಲ್ಲಿ ಹಮಾಸ್ ಕಮಾಂಡ್ ಪೋಸ್ಟ್ ಅಡಗಿಕೊಂಡಿದೆ ಎಂಬ ಇಸ್ರೇಲ್‌ನ ಹೇಳಿಕೆಗಳನ್ನು ಹಮಾಸ್ ಸರ್ಕಾರಿ ಮಾಧ್ಯಮ ಕಚೇರಿಯ ನಿರ್ದೇಶಕ ಇಸ್ಮಾಯಿಲ್ ಅಲ್-ತವಾಬ್ತಾ ತಿರಸ್ಕರಿಸಿದ್ದಾರೆ. ಡಜನ್‌ಗಟ್ಟಲೆ ನಿರಾಶ್ರಿತ ಜನರ ವಿರುದ್ಧ ನಡೆಸಿದ ಕ್ರೂರ ಅಪರಾಧವನ್ನು ಸಮರ್ಥಿಸಲು ಸುಳ್ಳು ಕಪೋಲಕಲ್ಪಿತ ಕಥೆಗಳನ್ನು ಇಸ್ರೇಲ್ ಹೇಳುತ್ತಿದೆ ಎಂದು ತವಾಬ್ತಾ ಹೇಳಿದ್ದಾರೆ.
ಇಸ್ರೇಲ್ ಫೈಟರ್ ಜೆಟ್ ದಾಳಿಯ ಮೊದಲು, ನಾಗರಿಕರಿಗೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡಲು ಮಿಲಿಟರಿ ಕ್ರಮಗಳನ್ನು ತೆಗೆದುಕೊಂಡಿದೆ. ಕದನ ವಿರಾಮ ಮಾತುಕತೆ ಸಂದರ್ಭದಲ್ಲಿ ದಾಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಇಸ್ರೇಲ್ ಹೇಳಿದೆ.
ಈ ಬೆಳವಣಿಗೆ ಕಳೆದ ವಾರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಪ್ರಸ್ತಾಪಿಸಿದ ಒಪ್ಪಂದದ ಪ್ರಸ್ತಾಪಕ್ಕೆ ಸ್ಪಷ್ಟವಾದ ಹೊಡೆತವಾಗಿದೆ. ಹಮಾಸ್ ನಾಯಕ ಗಾಝಾದಲ್ಲಿನ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಇಸ್ರೇಲ್ ಸೇನಾ ವಾಪಸಾತಿಗೆ ಆಗ್ರಹಿಸಿದ್ದರು.
ಕದನ ವಿರಾಮ ಒಪ್ಪಂದವನ್ನು ವಾಷಿಂಗ್ಟನ್ ಬಲವಾಗಿ ಸಮರ್ಥಿಸಿದೆ. CIA ನಿರ್ದೇಶಕ ವಿಲಿಯಂ ಬರ್ನ್ಸ್ ಕದನ ವಿರಾಮ ಪ್ರಸ್ತಾಪದ ಕುರಿತು ಚರ್ಚಿಸಲು ಮಧ್ಯವರ್ತಿಗಳಾದ ಕತಾರ್ ಮತ್ತು ಈಜಿಪ್ಟ್‌ನ ಹಿರಿಯ ಅಧಿಕಾರಿಗಳನ್ನು ಬುಧವಾರ ದೋಹಾದಲ್ಲಿ ಭೇಟಿಯಾಗಿದ್ದಾರೆ.
ನವೆಂಬರ್‌ನಲ್ಲಿ ಸಂಕ್ಷಿಪ್ತ ಕದನ ವಿರಾಮದ ನಂತರ ಕದನ ವಿರಾಮದ ಎಲ್ಲಾ ಪ್ರಯತ್ನಗಳು ಈವರೆಗೆ ವಿಫಲವಾಗಿವೆ. ಹಮಾಸ್ ಸಂಘರ್ಷಕ್ಕೆ ಶಾಶ್ವತ ಅಂತ್ಯದ ಬೇಡಿಕೆಯನ್ನು ಒತ್ತಾಯಿಸುತ್ತದೆ, ಆದರೆ ಇಸ್ರೇಲ್ ಹಮಾಸ್‌ನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಾಗಿ ಹೇಳಿಕೊಂಡಿದೆ. ಕಳೆದ ಹಲವು ದಿನಗಳಿಂದ ಕದನ ವಿರಾಮಗಳ ಬಗ್ಗೆ ಬಿಡೆನ್ ಪದೇ ಪದೇ ಘೋಷಿಸಿದ್ದಾರೆ. ಆದರೆ ಯಾವುದೇ ಕದನ ವಿರಾಮ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದನ್ನು ಗಮನಿಸಬಹುದಾಗಿದೆ.
ಹಮಾಸ್ ಅ.7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಬಳಿಕ ಯುದ್ಧ ಘೋಷಿಸಿ ಇಸ್ರೇಲ್ ಗಾಝಾ ಮೇಲೆ ನಡೆಸಿದ ದಾಳಿಗೆ 36,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಮೃತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಇದನ್ನು ಓದಿ: ‘ಮೈತ್ರಿಯಿಂದ ಯಾವುದೇ ಪ್ರಯೋಜನವಾಗಿಲ್ಲ’: ಪ.ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಕೊನೆಗೊಳಿಸಿದ ಕೆಲವು ಎಡ ಪಕ್ಷಗಳು


