ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಮೋದಿ 3.0 ಸರಕಾರದಲ್ಲಿ ಮೊದಲ ಅಸಮಾಧಾನ ಭುಗಿಲೆದ್ದಿದ್ದು, ಎನ್‌ಸಿಪಿ ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಸೇರಿಸಿಕೊಳ್ಳದ ಕಾರಣ ಎನ್‌ಡಿಎ ಮಿತ್ರಪಕ್ಷ ಎನ್‌ಸಿಪಿ ಅಸಮಾಧಾನಗೊಂಡಿದೆ.
ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂಬ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬೇಡಿಕೆಯನ್ನು ಎನ್‌ಡಿಎ ನಾಯಕತ್ವ ಭಾನುವಾರ ತಿರಸ್ಕರಿಸಿದೆ. ಅಜಿತ್ ಪವಾರ್ ಮತ್ತು ಪಟೇಲ್ ಎನ್‌ಡಿಎ ತೀರ್ಮಾನವನ್ನು ಒಪ್ಪಿಕೊಂಡಿದ್ದರೂ, ಅವರು ಸಾಧ್ಯವಾದಷ್ಟು ಬೇಗ ಈ ಕುರಿತು ಪರಿಹಾರ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಶನಿವಾರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ ನಡೆಸಿ, ಸಣ್ಣ ಪಕ್ಷಗಳಿಗೆ ಒಂದೇ ರಾಜ್ಯ ಸಚಿವ ಸ್ಥಾನವಿದೆ ಎಂದು ಹೇಳಿದ್ದರು. ಈ ಸಂದೇಶವನ್ನು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೂ ನೀಡಿದ್ದರು.
ಹಿರಿತನದ ಆಧಾರದಲ್ಲಿ ಪಟೇಲ್‌ಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಬಹುದೆಂದು ಎನ್‌ಸಿಪಿ ನಿರೀಕ್ಷಿಸಿತ್ತು. ಸ್ವತಂತ್ರ ಖಾತೆಯ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ನಾನು ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವನಾಗಿದ್ದೆ, ಆದ್ದರಿಂದ ಇದು ನನಗೆ ಹಿನ್ನಡೆಯಾಗುತ್ತದೆ. ನಾವು ಈ ಬಗ್ಗೆ ಬಿಜೆಪಿ ನಾಯಕತ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸ್ವಲ್ಪ ದಿನಗಳ ಕಾಲ ಕಾದು ನೋಡುವಂತೆ ಹೇಳಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ.
ರಾಜ್ಯ ಎನ್‌ಸಿಪಿ ಅಧ್ಯಕ್ಷ ಸುನೀಲ್ ತಟ್ಕರೆ ಅವರೊಂದಿಗೆ ದೆಹಲಿಯಲ್ಲಿ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ ಅಜಿತ್ ಪವಾರ್, ಪಟೇಲ್ ಅವರು ಹಿರಿಯ ನಾಯಕರಾಗಿದ್ದು, ಈ ಹಿಂದೆಯೇ ಕ್ಯಾಬಿನೆಟ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಎನ್‌ಸಿಪಿಗೆ ಕ್ಯಾಬಿನೆಟ್ ಸ್ಥಾನ ಸಿಗುತ್ತದೆ ಎಂದು ನಾವು ಕಾಯುತ್ತೇವೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮಹರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯಾಗಿದೆ. ಎನ್‌ಡಿಎ ಮೈತ್ರಿ ಪಕ್ಷ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 2022ರ ಜೂನ್ ನಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿಯಿಂದ ಹೊರ ನಡೆದ ಅಜಿತ್ ಪವಾರ್ ಪಕ್ಷದ 54 ಶಾಸಕರ ಪೈಕಿ 40 ಮಂದಿಯನ್ನು ತಮ್ಮ ಜತೆಗೆ ಕರೆದೊಯ್ದಿದ್ದರು. ಬಳಿಕ ಕಾನೂನು ಹೋರಾಟದಲ್ಲಿ ನೈಜ ಎನ್‌ಸಿಪಿ ಎಂದು ಕೋರ್ಟ್‌ನಿಂದ ಮಾನ್ಯತೆ ಪಡೆದಿದ್ದರು.
ಇದನ್ನು ಓದಿ: ಮೋದಿ ಸಂಪುಟ: ಕುಮಾರಸ್ವಾಮಿ, ಶೋಭಾ ಸೇರಿದಂತೆ ರಾಜ್ಯದ 5 ಮಂದಿಗೆ ಸಚಿವ ಸ್ಥಾನ


