ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ, ಚರ್ಚೆಗಳು ಮತ್ತು ಪ್ರಶ್ನೆಗಳು ಅವರ ಸುತ್ತ ಕೇಂದ್ರೀಕೃತವಾಗಿರದೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಇಬ್ಬರು ಪಾಲುದಾರರ ಸುತ್ತ ಸುತ್ತುತ್ತಿವೆ.
ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನತಾ ದಳ-ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಅವರು ಜೂನ್ 4 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಹೊರ ಬಂದಾಗಿನಿಂದ ಭಾರೀ ಸುದ್ದಿಯಲ್ಲಿದ್ದಾರೆ.
ಬಿಜೆಪಿ ಬಹುಮತ ಪಡೆಯದಿದ್ದರೂ, ಆಂಧ್ರ ಪ್ರದೇಶ ಮತ್ತು ಬಿಹಾರದ ಈ ಇಬ್ಬರು ನಾಯಕರ ಬೆಂಬಲದಿಂದ ಮೋದಿ ಮೂರನೇ ಬಾರಿ ಪ್ರಧಾನಿ ಹುದ್ದೆಗೇರಿದ್ದಾರೆ. ಈ ನಡುವೆ ಇಬ್ಬರೂ ಕೂಡ ತಮ್ಮ ಪಕ್ಷಕ್ಕೆ ಸ್ವೀಕರ್ ಹುದ್ದೆ ನೀಡುವಂತೆ ಕೇಳಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಎನ್‌ಡಿಎ ಸರ್ಕಾರಕ್ಕೆ ಬೆನ್ನೆಲುಬಾಗಿರುವ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಸಚಿವ ಸ್ಥಾನಕ್ಕಿಂತ ಸ್ಪೀಕರ್ ಹುದ್ದೆಗೆ ಏಕೆ ಲಾಬಿ ಮಾಡುತ್ತಿದ್ದಾರೆ? ಎಂದು ನಿಮಗನಿಸಬಹುದು. ಈ ಪ್ರಶ್ನೆಗೆ 1985ರಲ್ಲಿ 52ನೇ ತಿದ್ದುಪಡಿಯ ಮೂಲಕ ಪರಿಚಯಿಸಲಾದ ಸಂವಿಧಾನದ 10ನೇ ಶೆಡ್ಯೂಲ್‌ನಲ್ಲಿ ಸೂಚಿಸಲಾದ ಪಕ್ಷಾಂತರ ವಿರೋಧಿ ಕಾನೂನಿನಲ್ಲಿ ಉತ್ತರವಿದೆ.
ಸ್ವಯಂ ಪ್ರೇರಣೆಯಿಂದ ತಮ್ಮ ರಾಜಕೀಯ ಪಕ್ಷದ ಸದಸ್ಯತ್ವವನ್ನು ತೊರೆಯುವ ಅಥವಾ ಪಕ್ಷದ ಸೂಚನೆಗಳಿಗೆ ವಿರುದ್ಧವಾಗಿ ಮತ ಚಲಾಯಿಸುವ ಶಾಸಕರು, ಸಂಸದರು ಅನರ್ಹತೆಗೆ ಅರ್ಹರಾಗುತ್ತಾರೆ. ಆದರೆ, ಪಕ್ಷದ ಮೂರನೇ ಎರಡರಷ್ಟು ಚುನಾಯಿತ ಸಂಸದರು ಅಥವಾ ಶಾಸಕರು ಇನ್ನೊಂದು ಪಕ್ಷಕ್ಕೆ ಹೋದರೆ 10ನೇ ಶೆಡ್ಯೂಲ್ ಅವರನ್ನು ಅನರ್ಹತೆಯಿಂದ ರಕ್ಷಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಚುನಾಯಿತರನ್ನು ಅನರ್ಹಗೊಳಿಸಬೇಕೇ ಅಥವಾ ಬೇಡವೇ ಎಂಬುವುದನ್ನು ನಿರ್ಧರಿಸುವುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದಾಗಿದೆ.
ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಮಹಾರಾಷ್ಟ್ರದಲ್ಲಿ ಜನವರಿ 2024ರಲ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ‘ನೈಜ’ ಶಿವಸೇನೆ ಪಕ್ಷದ ಸ್ಥಾನಮಾನ ನೀಡಿರುವುದು. ಶಿಂಧೆ ನೇತೃತ್ವದ ಶಾಸಕರ ಬಣವು ಜೂನ್ 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ತಿರುಗಿಬಿದ್ದಿತ್ತು. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಫೆಬ್ರವರಿ 2023ರಲ್ಲಿ, ಪಕ್ಷಾಂತರ ವಿರೋಧಿ ಕಾನೂನಿನ ಪ್ರಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿರುವ ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್‌ನ ನಾಗರಿಕ ಮತ್ತು ಶಾಸಕಾಂಗ ಸಂಶೋಧನಾ ತೊಡಗುವಿಕೆಗಳ ಮುಖ್ಯಸ್ಥ ಚಕ್ಷು ರಾಯ್, “ಪ್ರಾಥಮಿಕವಾಗಿ ಭಾರತದಲ್ಲಿ ಸ್ಪೀಕರ್ ಸ್ಥಾನ ವಿರೋಧಾಭಾಸವಾಗಿದೆ. ಇದು ನಮ್ಮ ಶಾಸನ ರಚನೆ ಸಂಸ್ಥೆಯಾದ ಲೋಕಸಭೆಯ ಹೃದಯ ಭಾಗದಲ್ಲಿರುವ ಅತ್ಯಂತ ಪ್ರತಿಷ್ಠಿತ ಹುದ್ದೆಗಳಲ್ಲಿ ಒಂದಾಗಿದೆ. ಸ್ಪೀಕರ್‌ಗಳು ಪಕ್ಷೇತರರಾಗಿರಬೇಕು. ಸ್ಪೀಕರ್ ಹುದ್ದೆಯಲ್ಲಿರುವಾಗ ಪಕ್ಷದ ಸದಸ್ಯತ್ವ ತೊರೆದು ಸಾಂವಿಧಾನಿಕ ಜವಬ್ದಾರಿ ನಿರ್ವಹಿಸುತ್ತಾರೆ. ಹುದ್ದೆಯಿಂದ ಕೆಳಗಿಳಿದ ಬಳಿಕ ಅವರ ರಾಜಕೀಯ ವೃತ್ತಿ ಜೀವನದ ನಿರಂತರತೆಗಾಗಿ ಮತ್ತೆ ತಮ್ಮ ಪಕ್ಷಕ್ಕೆ ಮರಳುತ್ತಾರೆ. ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಸ್ಪೀಕರ್‌ಗೆ ನೀಡಲಾದ ಸಾಂವಿಧಾನಿಕ ಅಧಿಕಾರ ಸರ್ಕಾರ ರಚಿಸುವ ಮತ್ತು ಬೀಳಿಸುವ ಸಾಮರ್ಥ್ಯ ನೀಡುತ್ತದೆ” ಎಂದು ಹೇಳಿದ್ದಾರೆ.
ಲೋಕಸಭೆಯ ಸ್ಪೀಕರ್ ಅವರ ಪಕ್ಷಾತೀತತೆಯ ಕೊರತೆಯು ವಿವಾದದ ವಿಷಯವಾಗಿದೆ. ಜಿಎಂಸಿ ಬಾಲಯೋಗಿ (12ನೇ ಮತ್ತು 13ನೇ ಲೋಕಸಭೆ ಸ್ಪೀಕರ್) ಹಲವಾರು ಸಂಸದೀಯ ಸಮಿತಿಗಳ ಅಧ್ಯಕ್ಷರಾಗಿದ್ದರು ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಸ್ಪೀಕರ್ ಹುದ್ದೆಯ ಪಕ್ಷಾತೀತ ಸ್ವರೂಪದ ಹೊರತಾಗಿಯೂ, ಬಾಲಯೋಗಿ ಅವರು ಟಿಡಿಪಿ ನಾಯಕರಾಗಿದ್ದರು, ತಮ್ಮ ಪಕ್ಷದ ಹಿತಾಸಕ್ತಿಗಳನ್ನು ರಕ್ಷಿಸಲು ಉತ್ಸುಕರಾಗಿದ್ದರು.
ಸುಮಾರು 10 ವರ್ಷಗಳ ಹಿಂದೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ನಿತೀಶ್ ಅವರ ಜೆಡಿಯು ಜೊತೆಗಿನ ಮಹಾಘಟಬಂಧನ್ (ಮಹಾ ಮೈತ್ರಿ) ಬದ್ಧತೆಯ ಬಗ್ಗೆ ನೀಡಿದ್ದ ಹೇಳಿಕೆ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಈಗ ಸ್ಪೀಕರ್ ಹುದ್ದೆಗೆ ಏಕೆ ಲಾಬಿ ಮಾಡುತ್ತಿರಬಹುದು ಎಂಬುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಸುತ್ತದೆ.
“ನಾವು ನಿಜವಾಗಿಯೂ ಹೆಚ್ಚಿನ ಅಧಿಕಾರಕ್ಕಾಗಿ ಸರ್ಕಾರವನ್ನು ಬೀಳಿಸಲು ಬಯಸಿದ್ದರೆ ಸ್ಪೀಕರ್ ಹುದ್ದೆ ಕೇಳುತ್ತಿದ್ದೆವು” ಎಂದು ಯಾದವ್ ಹೇಳಿದ್ದರು. ಅಂದರೆ, ಇಲ್ಲಿ ಸರ್ಕಾರ ಬೀಳಿಸುವ ಮತ್ತು ರಚಿಸುವ ಅಧಿಕಾರ ಸ್ಪೀಕರ್ ಕೈಯ್ಯಲ್ಲಿರುತ್ತದೆ. ಆದ್ದರಿಂದ ಆ ಹುದ್ದೆ ಅಷ್ಟೊಂದು ಮಹತ್ವದ್ದು ಎಂದು ನಮಗೆ ಅರ್ಥವಾಗುತ್ತದೆ.
ಇದನ್ನೂ ಓದಿ : ಮೋದಿ ಸರ್ಕಾರದ 72 ಸಚಿವರಲ್ಲಿ 7 ಮಹಿಳೆಯರಿಗೆ ಅವಕಾಶ; ಇಬ್ಬರಿಗೆ ಮಾತ್ರ ಕ್ಯಾಬಿನೆಟ್ ದರ್ಜೆ


