ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟ ಬ್ರಿಕ್ಸ್ ದಕ್ಷಿಣ ಪ್ಯಾಲೆಸ್ತೀನ್ ರಫಾದಲ್ಲಿನ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿದೆ ಮತ್ತು ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶಗಳ ನಿರ್ಲ್ಷಕ್ಷ್ಯದ ಬಗ್ಗೆ ಕಳವಳನ್ನು ವ್ಯಕ್ತಪಡಿಸಿದೆ.
ಬ್ರಿಕ್ಸ್ ಗುಂಪಿನ ದೇಶಗಳ ವಿದೇಶಾಂಗ ಸಚಿವರುಗಳು ಸೋಮವಾರ ರಷ್ಯಾದಲ್ಲಿ ಸಭೆ ಸೇರಿದ್ದರು. ಸಭೆಯಲ್ಲಿ ಭಾರತದ ಕಾರ್ಯದರ್ಶಿ ದಮ್ಮು ರವಿ ಭಾಗಿಯಾಗಿದ್ದರು.
ಭಾರತವು ಬ್ರೆಜಿಲ್, ರಷ್ಯಾ ಮತ್ತು ಚೀನಾ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಬ್ರಿಕ್ಸ್‌ನ ಸ್ಥಾಪಕ ಸದಸ್ಯ ದೇಶಗಳಲ್ಲಿ ಒಂದಾಗಿದೆ. ಕಳೆದ ವರ್ಷದ ಶೃಂಗಸಭೆಯಲ್ಲಿ ಬ್ಲಾಕ್ ತನ್ನ ಸದಸ್ಯತ್ವವನ್ನು ದ್ವಿಗುಣಗೊಳಿಸಿದ ನಂತರ, ಈಜಿಪ್ಟ್, ಇರಾನ್, ಯುಎಇ, ಸೌದಿ ಅರೇಬಿಯಾ ಮತ್ತು ಇಥಿಯೋಪಿಯಾ ಸೇರಿಕೊಂಡಿದ್ದವು. ಸೋಮವಾರ ನಡೆದ ವಿಸ್ತೃತ ಶೃಂಗಸಭೆಯ ಮೊದಲ ಪ್ರಮುಖ ಸಭೆಯಲ್ಲಿ ಹೊಸದಾಗಿ ಸೆರ್ಪಡೆಗೊಂಡಿದ್ದ ದೇಶಗಳ ಪ್ರತಿನಧಿಗಳು ಕೂಡ ಭಾಗವಹಿಸಿದ್ದರು.
ಗಾಝಾದ ಮೇಲೆ ಇಸ್ರೇಲ್ ಹತ್ಯಾಕಾಂಡವನ್ನು ಭಾರತ ಈ ಮೊದಲಿನಿಂದಲೇ ಖಂಡಿಸುತ್ತಾ ಬಂದಿದೆ. ರಷ್ಯಾದಲ್ಲಿ ನಡೆದ ಸಭೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ಇಸ್ರೇಲ್‌ನ ಕೃತ್ಯವನ್ನು ಖಂಡಿಸಿದೆ.
ರಾಫಾದಲ್ಲಿ ಇಸ್ರೇಲ್ ಮಿಲಿಟರಿ ದಾಳಿ ಮತ್ತು ನಾಗರಿಕರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಅದರ ಪರಿಣಾಮಗಳನ್ನು ಬ್ರಿಕ್ಸ್ ಸದಸ್ಯರಾಷ್ಟ್ರಗಳು ಬಲವಾಗಿ ಖಂಡಿಸಿದೆ.
ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಗಾಝಾದ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದ ಬಳಿಕ ಕಳೆದ ಒಂಬತ್ತು ತಿಂಗಳಲ್ಲಿ 36,000ಕ್ಕೂ ಹೆಚ್ಚು ಜನರನ್ನು ಇಸ್ರೇಲ್ ಹತ್ಯೆ ಮಾಡಿದೆ. ಗಾಝಾ ಪಟ್ಟಿಯ ಮೇಲೆ ಆಕ್ರಮಣದ ವೇಳೆ ಲಕ್ಷಾಂತರ ಪ್ಯಾಲೆಸ್ತೀನ್ ನಾಗರಿಕರು ರಫಾದಲ್ಲಿ ತೆರಳಿ ನಿರಾಶ್ರಿತರ ಶಿಬಿರದಲ್ಲಿ ಉಳಿದುಕೊಂಡಿದ್ದರು. ರಫಾವನ್ನು ಯುದ್ಧ ಸಂತ್ರಸ್ತ ನಿರಾಶ್ರಿತರ ಕೊನೆಯ ತಾಣ ಎಂದು ಹೇಳಲಾಗಿತ್ತು. ಆದರೆ ಇಸ್ರೇಲ್ ರಫಾವನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ. ರಫಾದಲ್ಲಿ ಇಸ್ರೇಲ್ ಆಕ್ರಮಣವು ನಾಗರಿಕರ ಸಾವುನೋವುಗಳನ್ನು ಅಗಾಧವಾಗಿ ಹೆಚ್ಚಿಸುತ್ತದೆ ಎಂದು ವಿಶ್ವವೇ ಕಳವಳ ವ್ಯಕ್ತಪಡಿಸಿದೆ.
ಇಸ್ರೇಲ್, ಅಂತರಾಷ್ಟ್ರೀಯ ಕಾನೂನು, ಯುಎನ್ ಚಾರ್ಟರ್, ಯುಎನ್ ನಿರ್ಣಯಗಳು ಮತ್ತು ನ್ಯಾಯಾಲಯದ ಆದೇಶಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವ ಬಗ್ಗೆ ಗಂಭೀರ ಕಳವಳವನ್ನು ಬಿಕ್ಸ್ ಸದಸ್ಯ ರಾಷ್ಟ್ರಗಳು ವ್ಯಕ್ತಪಡಿಸಿದೆ.
ಇಸ್ರೇಲಿ ದಾಳಿಯಿಂದ ಪ್ಯಾಲೆಸ್ತೀನ್‌ನಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬ್ರಿಕ್ಸ್ ದೇಶಗಳು ಜಂಟಿ ಹೇಳಿಕೆಯಲ್ಲಿ ತಕ್ಷಣದ ಕದನ ವಿರಾಮ ಮತ್ತು ಯಾವುದೇ ಅಡೆ ತಡೆಯಿಲ್ಲದೆ ಪ್ಯಾಲೆಸ್ತೀನ್‌ಗೆ ನೆರವು ತಲುಪಿಸುವ ಯುಎನ್ ನಿರ್ಣಯಗಳನ್ನು ಜಾರಿಗೆ ತರಲು ಕರೆ ನೀಡಿದೆ. ಎಲ್ಲಾ ಒತ್ತೆಯಾಳುಗಳು ಮತ್ತು ನಾಗರಿಕರನ್ನು ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಲು ಅವರು ಹಮಾಸ್ ಮತ್ತು ಇಸ್ರೇಲ್‌ಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಕರೆನೀಡಿದೆ.
ಇದನ್ನು ಓದಿ: ಮೂಲಭೂತ ಹಕ್ಕುಗಳಷ್ಟೇ ಗೌರವಯುತ ಅಂತ್ಯಕ್ರಿಯೆ ಮೃತ ವ್ಯಕ್ತಿಯ ಹಕ್ಕು: ಮುಂಬೈ ಹೈಕೋರ್ಟ್


