ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ (93) ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು (ಜೂನ್ 11) ನಿಧನರಾಗಿದ್ದಾರೆ.
ಕುವೆಂಪು ನಗರದ ಪಂಚಮಂತ್ರ ರಸ್ತೆಯಲ್ಲಿರುವ ನಿವಾಸದಲ್ಲಿ, ತಿಂಗಳ ಹಿಂದೆ ಕುಸಿದು ಬಿದ್ದು ಅವರ
ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದರು. ಈ ನಡುವೆ
ಇಂದು ರಾತ್ರಿ 7.05ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಾಜೀವ್ ತಾರಾನಾಥ್ ಅವರು ಬೆಂಗಳೂರಿನಲ್ಲಿ 17 ಅಕ್ಟೋಬರ್ 1932 ರಂದು ಜನಿಸಿದರು. ಅವರು ತಮ್ಮ ತಂದೆ ಪಂಡಿತ್ ತಾರಾನಾಥ್ ಅವರಿಂದ ಗಾಯನ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದರು. ಒಂಬತ್ತು ವರ್ಷದವರಾಗಿದ್ದಾಗ ತಮ್ಮ ಮೊದಲ ಸಾರ್ವಜನಿಕ ಗಾಯನ ಪ್ರದರ್ಶನವನ್ನು ನೀಡಿದ್ದರು. ರಾಜೀವ್ ಅವರು ತಮ್ಮ ಇಪ್ಪತ್ತು ವಯಸ್ಸಿಗಿಂತ ಮೊದಲು ಆಕಾಶವಾಣಿಗೆ ಹಾಡುತ್ತಿದ್ದರು.
ಸಾಹಿತ್ಯದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದ ರಾಜೀವ್ ತಾರಾನಾಥ್ ಅವರು, ತಿರುಚಿರಾಪಳ್ಳಿಯ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಗೀತದ ಮೇಲಿನ ಪ್ರೀತಿಯಿಂದಾಗಿ ತಮ್ಮ ವೃತ್ತಿಯನ್ನು ತ್ಯಜಿಸಿ ಕೊಲ್ಕತ್ತಾಗೆ ತೆರಳಿ, ಅಲ್ಲಿ ಅಲೀ ಅಕ್ಬರ್ ಖಾನ್ ಅವರ ಮಾರ್ಗದರ್ಶನದಲ್ಲಿ ಸಂಗೀತ ತರಬೇತಿ ಪಡೆದಿದ್ದರು.
ರಾಜೀವ್ ತಾರನಾಥ್ ಅವರ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ-1998, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ-1993, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-1996, ಕೆಂಪೇಗೌಡ ಪ್ರಶಸ್ತಿ- 2006, ಗಾಯನ ಸಮಾಜದಿಂದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿ, ಭ್ರಮರಾಂಬಾ ಎನ್ ನಾಗರಾಜ್ ಬಂಗಾರದ ಪದಕ, ವಿ. ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪ್ರಶಸ್ತಿ, ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕುವೆಂಪು ನಗರದ ನಿವಾಸದಲ್ಲಿ ಬುಧವಾರ (ಜೂನ್ 12) ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ರಾಜೀವ್ ತಾರಾನಾಥ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಜಗತ್ಪ್ರಸಿದ್ದ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ಅವರ ನಿಧನದಿಂದ ದು:ಖಿತನಾಗಿದ್ದೇನೆ.
ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ
ತುಂಬಲಾರದ ನಷ್ಟ.ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ… pic.twitter.com/Eiow6n8KYY
— CM of Karnataka (@CMofKarnataka) June 11, 2024
ಇದನ್ನೂ ಓದಿ : ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಆರೋಪಿಗಳು ಪೊಲೀಸ್ ಕಸ್ಟಡಿಗೆ


