ಲೋಕಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾಗಿ ಹೊಸ ಸರ್ಕಾರ ರಚನೆಯಾದ ಬಳಿಕ, ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಮುಸ್ಲಿಂ ಮಹಿಳೆಯರು ಬ್ಯಾಂಕ್, ಅಂಚೆ ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೋಗಳನ್ನ ಹಂಚಿಕೊಂಡು, ” ಇವರು ಕಾಂಗ್ರೆಸ್‌ನ ಕಟಾ ಕಟಾ ಹಣಕ್ಕಾಗಿ ಕಾಯುತ್ತಿದ್ದಾರೆ” ಎಂದು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.
Baba Banaras(@RealBababanaras) ಎಂಬ ಎಕ್ಸ್ ಬಳಕೆದಾರ ಬುರ್ಕಾಧಾರಿ ಮಹಿಳೆಯರು ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ಕುಳಿತಿದ್ದ ವಿಡಿಯೋವೊಂದನ್ನು ಇತ್ತೀಚೆಗೆ ಹಂಚಿಕೊಂಡು, “ಅಕ್ಬರ್, ಬಾಬರ್ ಮತ್ತು ಔರಂಗಝೇಬ್‌ನ ಕುಟುಂಬ ಸದಸ್ಯರು ರಾಹುಲ್ ಗಾಂಧಿಯವರ “ಕಟಾಕಟ್ ಯೋಜನೆ” ಅಡಿಯಲ್ಲಿ ತಿಂಗಳಿಗೆ ಸಿಗುವ 8,500 ರೂಪಾಯಿ ಪಡೆಯಲು ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.

ಫ್ಯಾಕ್ಟ್ ಚೆಕ್ : ಎಕ್ಸ್ ಬಳಕೆದಾರ ಹಂಚಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಇದು 2020ರಲ್ಲಿ ಕೇಂದ್ರ ಸರ್ಕಾರದ ಜನ್‌ಧನ್ ಯೋಜನೆಯ ಮಹಿಳಾ ಫಲಾನುಭವಿಗಳು ಉತ್ತರ ಪ್ರದೇಶದ ಮುಝಾಫರ್ ನಗರದ ಬ್ಯಾಂಕ್ ಒಂದರ ಹೊರಗೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಎಂದು ಗೊತ್ತಾಗಿದೆ.
ಆಗಾಗ ಕೋಮು ವೈಷಮ್ಯದ ಸುದ್ದಿಗಳನ್ನು ಹಂಚಿಕೊಳ್ಳುವ ಸುದರ್ಶನ್ ನ್ಯೂಸ್‌ನ ಸಂಪಾದಕ ಸುರೇಶ್ ಚವ್ಹಾಂಕೆ 2021ರಲ್ಲಿ ಇದೇ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡು “ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಿ, ಉಚಿತ ಪಡಿತರ ಸಾಲು ನೋಡಿ ಕಣ್ಣು ತೆರೆಯಿರಿ” ಎಂದು ಹಿಂದಿ ಭಾಷೆಯಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಪರೋಕ್ಷವಾಗಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ದ್ವೇಷ ಹರಡುವ ಪ್ರಯತ್ನ ಮಾಡಿದ್ದರು.

ಸುರೇಶ್ ಚವ್ಹಾಂಕೆ ಹಂಚಿಕೊಂಡಿದ್ದ ವಿಡಿಯೋಗೆ ಕಮೆಂಟ್ ಮಾಡಿದ್ದ ಖ್ಯಾತ ಫ್ಯಾಕ್ಟ್ ಚೆಕ್ ಸಂಸ್ಥೆ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್” “ಕಳೆದ ವರ್ಷ ಮುಝಾಫರ್ ನಗರದ ಬ್ಯಾಂಕ್‌ನ ಹೊರಗೆ ಮಹಿಳೆಯರು ತಮ್ಮ ಜನ್ ಧನ್ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಭಯದಿಂದ ಸರತಿ ಸಾಲಿನಲ್ಲಿ ನಿಂತಿದ್ದ ವಿಡಿಯೋವನ್ನು, ಮುಸ್ಲಿಂ ಮಹಿಳೆಯರು ಉಚಿತ ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ” ಎಂದು ತಿಳಿಸಿದ್ದರು.

ಏಪ್ರಿಲ್ 20, 2020ರಲ್ಲಿ ನ್ಯೂಸ್ 18 ಇಂಡಿಯಾ ಈ ಕುರಿತು ವಿಡಿಯೋ ಸುದ್ದಿ ಪ್ರಕಟಿಸಿತ್ತು. ಸುದ್ದಿಯಲ್ಲಿ “ಜನ್ ಧನ್ ಯೋಜನೆಯ ಫಲಾನುಭವಿಗಳು ತಮ್ಮ ಖಾತೆಯಲ್ಲಿ ಠೇವಣಿ ಇಟ್ಟಿರುವ 500 ರೂ. ಅನ್ನು ಹಿಂತೆಗೆದುಕೊಳ್ಳದಿದ್ದರೆ ಬ್ಯಾಂಕ್‌ಗೆ ವಾಪಸ್ ಹೋಗಲಿದೆ ಎಂಬ ವದಂತಿ ಹಬ್ಬಿದೆ. ಇದರಿಂದ ಮಹಿಳಾ ಖಾತೆದಾರರು ತಮ್ಮ ಖಾತೆಯಿಂದ ಹಣ ವಾಪಸ್ ಪಡೆದುಕೊಳ್ಳಲು ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಬ್ಯಾಂಕ್ ಅಧಿಕಾರಿಗಳು ಖಾತೆಯಿಂದ ಹಣ ವಾಪಸ್ ಹೋಗುವುದಿಲ್ಲ. ಖಾತೆಯಲ್ಲೇ ಉಳಿಯಲಿದೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿತ್ತು.
ಕೋವಿಡ್ -19ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಸಹಾಯವಾಗಲೆಂದು ಜನ್ ಧನ್ ಖಾತೆದಾರರಿಗೆ ಮೂರು ತಿಂಗಳಿಗೊಮ್ಮೆ 500 ರೂ. ಸಹಾಯಧನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಮಹಿಳೆಯರ ಖಾತೆಗೆ 500 ರೂ. ಜಮಾ ಮಾಡಲಾಗಿತ್ತು. ಹೀಗೆ ಜಮೆಯಾದ ಹಣ ಡ್ರಾ ಮಾಡದಿದ್ದರೆ ವಾಪಸ್ ಹೋಗಲಿದೆ ಎಂಬ ವದಂತಿ ಹರಡಿದ್ದರಿಂದ ಮಹಿಳಾ ಖಾತೆದಾರರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತಿದ್ದರು. ಆದರ ವಿಡಿಯೋ ಈಗ ಹಂಚಿಕೊಳ್ಳಲಾಗಿದೆ ಎಂಬುವುದು ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದಿದೆ.
ನಾವು ಮೇಲೆ ಉಲ್ಲೇಖಿಸಿದಂತೆ ಎಕ್ಸ್ ಬಳಕೆದಾರ ಹಂಚಿಕೊಂಡಿರುವ ವಿಡಿಯೋ, ರಾಹುಲ್ ಗಾಂಧಿ ಹೇಳಿರುವ ಕಾಂಗ್ರೆಸ್‌ನ ಭರವಸೆಯಾದ ಮಹಾಲಕ್ಷಿ ಯೋಜನೆಯ ಹಣ ಪಡೆಯಲು ಮಹಿಳೆಯರು ಕಾಯುತ್ತಿರುವುದಲ್ಲ. ಬದಲಿಗೆ 2020ರಲ್ಲಿ ಜನ್ ಧನ್ ಖಾತೆಯ ಹಣ ಡ್ರಾ ಮಾಡಲು ಕಾದಿರುವ ವಿಡಿಯೋ ಆಗಿದೆ.
ಇದನ್ನೂ ಓದಿ : FACT CHECK : ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬುವುದು ಸುಳ್ಳು


