ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563 ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಜೂನ್ 23ಕ್ಕೆ ದಿನಾಂಕ ನಿಗದಿ ಮಾಡಿದೆ.
ಕೃಪಾಂಕ (ಗ್ರೇಸ್ ಮಾರ್ಕ್) ರದ್ದತಿಗೆ ಒಪ್ಪಿಗೆ ನೀಡುವ ಮೂಲಕ ನೀಟ್ ಹಗರಣದಿಂದ ಹೊರಬರುವ ಕೇಂದ್ರ ಸರ್ಕಾರದ ಪ್ರಯತ್ನ ಅವರ ಸ್ವಂತ ಅಸಮರ್ಥತೆಯ ಮತ್ತೊಂದು ಒಪ್ಪಿಕೊಳ್ಳುವಿಕೆಯಾಗಿದೆ. ರಾಜ್ಯಗಳ ಹಕ್ಕನ್ನು ಕಸಿದುಕೊಂಡ ನಂತರ ಅಕ್ರಮಗಳು ಮತ್ತು ಪರೀಕ್ಷೆಗಳ ವೃತ್ತಿಪರವಲ್ಲದ ನಡವಳಿಕೆಯ ಪ್ರಮುಖ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಅನುಮತಿಸಬಾರದು ಎಂದು ಸ್ಟಾಲಿನ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
The Union Government’s attempt to wriggle out of the recent #NEET Scam by agreeing to cancellation of grace marks is another admission of their own ineptitude.
It should not be allowed to divert the attention away from the core problems of irregularities and unprofessional… https://t.co/Bzn1YciYGO
— M.K.Stalin (@mkstalin) June 13, 2024
ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರದ ಅಸಮರ್ಥತೆಯಿಂದ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ನಿರಾಸಕ್ತಿಯನ್ನು ಖಂಡಿಸುತ್ತೇವೆ. ವೈದ್ಯಕೀಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ವಿಧಾನವನ್ನು ನಿರ್ಧರಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಪುನಃಸ್ಥಾಪಿಸುವುದು ಈ ಸಮಸ್ಯೆಗೆ ಏಕೈಕ ಪರಿಹಾರವಾಗಿದೆ ಎಂದು ನಾವು ಪುನರುಚ್ಚರಿಸುತ್ತೇವೆ ಎಂದಿದ್ದಾರೆ.
ನೀಟ್ ಪರೀಕ್ಷೆಯಲ್ಲಿ 1,563 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ ಎಂಬ ವಿಷಯ ಬಯಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸರಿಯಾಗಿ ಸಮಯ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಕೃಪಾಂಕ ನೀಡಿದ್ದೇವೆ ಎಂದು ಎನ್‌ಟಿಎ ಸಮರ್ಥಿಸಿಕೊಂಡಿತ್ತು.
ಆದರೆ, ಇತರ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕೃಪಾಂಕ ಮರು ಪರಿಶೀಲನೆಗೆ ನಾಲ್ವರ ಸಮಿತಿ ರಚಿಸಲಾಗಿದೆ ಎಂದು ಎನ್‌ಟಿಎ ಸುದ್ದಿಗೋಷ್ಠಿ ಕರೆದು ಹೇಳಿತ್ತು. ಈ ನಡುವೆ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ಎನ್‌ಟಿಎಗೆ ನೋಟಿಸ್ ಜಾರಿ ಮಾಡಿತ್ತು.
ಕೋರ್ಟ್ ನೋಟಿಸ್‌ಗೆ ಉತ್ತರಿಸಿದ ಎನ್‌ಟಿಎ, ಕೃಪಾಂವನ್ನೇ ರದ್ದುಪಡಿಸಲಾಗುವುದು. 1,563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿತ್ತು. ಈ ಬೆನ್ನಲ್ಲೇ ಜೂನ್ 23ಕ್ಕೆ ಮರು ಪರೀಕ್ಷೆ ನಿಗದಿ ಮಾಡಿದೆ.
ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವ ಮೂಲಕ ಕೈ ತೊಳೆದುಕೊಂಡರೆ ಸಾಲದು, ಆರಂಭದಲ್ಲಿ ಕೃಪಾಂಕ ನೀಡಿರುವುದು ಮತ್ತು 67 ವಿದ್ಯಾರ್ಥಿಗಳು 720 ಪರಿಪೂರ್ಣ ಅಂಕ ಪಡೆದಿರುವ ಬಗ್ಗೆ ತನಿಖೆಯಾಗಬೇಕು ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸಿಕ್ಕಿಂ: ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಎಂ ಪತ್ನಿ


