ನಟಿ, ಸಂಸದೆ ಕಂಗನಾ ರಣಾವತ್‌ಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ಆರೋಪ ಜೂನ್ 7, 2024ರಂದು ಕೇಳಿ ಬಂದಿತ್ತು.
ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಕಂಗನಾ ಜೂನ್ 4ರಂದು ಹೊರಬಿದ್ದ ಫಲಿತಾಂಶದಲ್ಲಿ ಜಯಗಳಿಸಿದ್ದರು. ಈ ಬೆನ್ನಲ್ಲೇ ಕಂಗನಾ ಮೇಲೆ ಕಪಾಳಮೋಕ್ಷ ನಡೆದಿದೆ ಎನ್ನುವುದು ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಕಂಗನಾಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ಸಿಐಎಸ್‌ಎಫ್ ಸಿಬ್ಬಂದಿಯ ಹೆಸರು ಕುಲ್ವಿಂದರ್ ಕೌರ್ ಎಂದು ತಿಳಿದು ಬಂದಿದೆ. ಈಕೆಯ ತಾಯಿಯೂ ಪಾಲ್ಗೊಂಡಿದ್ದ ರೈತ ಹೋರಾಟದ ಕುರಿತು ಕೀಳು ಮಟ್ಟದ ಹೇಳಿಕೆ ನೀಡಿದ್ದಕ್ಕೆ ಕಂಗನಾಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.
ಕಪಾಳಮೋಕ್ಷ ಆರೋಪ ಕೇಳಿ ಬಂದ ಬಳಿಕ ಕುಲ್ವಿಂದರ್ ಕೌರ್ ಅವರನ್ನು ಖಲಿಸ್ತಾನಿ, ಭಯೋತ್ಪಾದಕಿ ಎಂದೆಲ್ಲ ಬಿಂಬಿಸುವ ಪ್ರಯತ್ನಗಳು ನಡೆದಿವೆ.
ಇತ್ತೀಚೆಗೆ ಗಾಂಧಿ ಕುಟುಂಬ (ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ)ದ ಜೊತೆ ಮಹಿಳೆಯೊಬ್ಬರು ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆ ಮಹಿಳೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಕುಲ್ವಿಂದರ್ ಕೌರ್ ಎಂದು ಸುದ್ದಿ ಹಬ್ಬಿದೆ.

ಫ್ಯಾಕ್ಟ್‌ಚೆಕ್ : ಕಂಗನಾಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ಕುಲ್ವಿಂದರ್ ಕೌರ್ ಗಾಂಧಿ ಕುಟುಂಬ ಆಪ್ತೆ ಎಂಬ ರೀತಿಯಲ್ಲಿ ಸುದ್ದಿ ಹಬ್ಬಿರುವ ಹಿನ್ನೆಲೆ, ವೈರಲ್ ಫೋಟೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ.
ಕಂಗನಾಗೆ ಕಪಾಳಮೋಕ್ಷ ಮಾಡಿದ ಆರೋಪ ಕೇಳಿ ಬಂದಾಗ ವೈರಲ್ ಆದ ಕುಲ್ವಿಂದರ್ ಕೌರ್ ಅವರ ಫೋಟೋ ಮತ್ತು ಗಾಂಧಿ ಕುಟುಂಬದ ಜೊತೆ ನಿಂತಿರುವ ಮಹಿಳೆಯ ಫೋಟೋಗಳನ್ನು ನಾವು ಹೋಲಿಕೆ ಮಾಡಿ ನೋಡಿದ್ದು, ಎರಡೂ ಫೋಟೋಗಳ ನಡುವೆ ವ್ಯತ್ಯಾಸ ಕಂಡು ಬಂದಿದೆ.

ಗಾಂಧಿ ಕುಟುಂಬದ ಜೊತೆ ಮಹಿಳೆ ನಿಂತಿರುವ ಫೋಟೋವನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿ ನೋಡಿದಾಗ, “ಫೆಬ್ರವರಿ 14,2024 ರಂದು ಮಾಜಿ ಕಾಂಗ್ರೆಸ್ ಶಾಸಕಿ ದಿವ್ಯಾ ಮಹಿಪಾಲ್ ಮಡೆರ್ನಾ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಈ ಪೋಟೋ ಕಂಡು ಬಂದಿದೆ.

ಫೋಟೋದಲ್ಲಿ ಜೊತೆಗಿ ಬಂದಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಸ್ವಾಗತಿಸಲಾಯಿತು ಎಂದು ಬರೆಯಲಾಗಿದೆ.
ಈ ಮೂಲಕ ಗಾಂಧಿ ಕುಟುಂಬದ ಜೊತೆಗೆ ನಿಂತಿರುವ ಮಹಿಳೆ ಕಂಗನಾಗೆ ಕಪಾಳಮೋಕ್ಷ ಮಾಡಿರುವ ಕುಲ್ವಿಂದರ್ ಕೌರ್ ಅಲ್ಲ, ಮಾಜಿ ಕಾಂಗ್ರೆಸ್ ಶಾಸಕಿ ದಿವ್ಯಾ ಮಹಿಪಾಲ್ ಮಡೆರ್ನಾ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಗೊತ್ತಾಗಿದೆ.
ಇದನ್ನೂ ಓದಿ : FACT CHECK : ರಸ್ತೆ ಮಧ್ಯೆ ಯುವತಿಯನ್ನು ಗುಂಡಿಕ್ಕಿ ಕೊಂದಿರುವ ವಿಡಿಯೋ ಮಣಿಪುರದ್ದಲ್ಲ



Naanu ghori