ಕೃತಕ ಬುದ್ಧಿಮತ್ತೆ (ಎಐ) ಅಥವಾ ಮಾನವರಿಂದ ಹ್ಯಾಕ್ ಆಗುವ ಸಾಧ್ಯತೆಗಳು ಇರುವುದರಿಂದ ವಿದ್ಯುನ್ಮಾನ ಮತಯಂತ್ರ (ಇವಿಎಂ) ನಿಷೇಧಿಸಬೇಕು ಎಂದು ಟೆಸ್ಲಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಲಾನ್ ಮಸ್ಕ್ ಆಗ್ರಹಿಸಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಮಸ್ಕ್ ನೀಡಿರುವ ಹೇಳಿಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಭಾರತದ ವಿಪಕ್ಷ ನಾಯಕರೂ ಧನಿಗೂಡಿಸಿದ್ದಾರೆ.
We should eliminate electronic voting machines. The risk of being hacked by humans or AI, while small, is still too high. https://t.co/PHzJsoXpLh
— Elon Musk (@elonmusk) June 15, 2024
ಮಾಧ್ಯಮ ವರದಿಯ ಬಗ್ಗೆ ಪೋಸ್ಟ್ ಮಾಡಿದ್ದ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರು, “ಅಸೋಸಿಯೇಟೆಡ್ ಪ್ರೆಸ್ ಪ್ರಕಾರ ಪೋರ್ಟೊ ರಿಕೊದ ಪ್ರಾಥಮಿಕ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ಸಂಬಂಧಿಸಿದ ನೂರಾರು ಅಕ್ರಮಗಳು ನಡೆದಿವೆ. ಅದೃಷ್ಟವಶಾತ್, ಪೇಪರ್ ಟ್ರಯಲ್ ಇದ್ದುದರಿಂದ ಸಮಸ್ಯೆಯನ್ನು ಗುರುತಿಸಿ ಮತ ಎಣಿಕೆಯನ್ನು ಸರಿಪಡಿಸಲಾಗಿದೆ. ಪೇಪರ್ ಟ್ರಯಲ್ ಇಲ್ಲದಿದ್ದರೆ ಏನಾಗಬಹುದು?” ಎಂದು ಪ್ರಶ್ನಿಸಿದ್ದರು.
“ಯುಎಸ್ ನಾಗರಿಕರು ತಮ್ಮ ಪ್ರತಿಯೊಂದು ಮತಗಳನ್ನು ಎಣಿಸಲಾಗಿದೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬುವುದನ್ನು ತಿಳಿದಿರಬೇಕು. ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಹಸ್ತಕ್ಷೇಪವನ್ನು ತಪ್ಪಿಸಲು ನಾವು ಪೇಪರ್ ಬ್ಯಾಲೆಟ್‌ಗಳಿಗೆ ಹಿಂತಿರುಗಬೇಕಾಗಿದೆ. ನನ್ನ ಆಡಳಿತ ಬ್ಯಾಲೆಟ್ ಪೇಪರ್ ಚುನಾವಣೆಗೆ ಹಿಂದಿರುಗಲಿದೆ ಮತ್ತು ಪ್ರಾಮಾಣಿಕ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಾತರಿಪಡಿಸಲಿದೆ” ಎಂದಿದ್ದರು.
ಜೂನ್ 2 ರಂದು ನ್ಯೂ ಪ್ರೋಗ್ರೆಸಿವ್ ಪಾರ್ಟಿ (ಪಿಎನ್‌ಪಿ) ಮತ್ತು ಪಾಪ್ಯುಲರ್ ಡೆಮಾಕ್ರಟಿಕ್ ಪಾರ್ಟಿ (ಪಿಪಿಡಿ) ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪೋರ್ಟೊ ರಿಕೊದಲ್ಲಿ ಪ್ರಾಥಮಿಕ ಚುನಾವಣೆ ನಡೆದಿದೆ. ಮತ ಎಣಿಕೆಯ ಬಳಿಕ ಎರಡೂ ಪಕ್ಷಗಳು ಬ್ಯಾಲೆಟ್ ಪೇಪರ್ ತಪ್ಪಾದ ಫಲಿತಾಂಶ ತೋರಿಸಿದೆ ಎಂದು ಹೇಳಿಕೊಂಡಿವೆ. ಪಿಎನ್‌ಪಿ 700 ದೋಷಗಳ ಬಗ್ಗೆ ವರದಿ ಮಾಡಿದ್ದು,ಪಿಪಿಡಿ 350 ವ್ಯತ್ಯಾಸಗಳನ್ನು ತೋರಿಸಿದೆ.
ಬಳಿಕ, ಚುನಾವಣಾ ಆಯೋಗ ನೂರಾರು ಮತ ಎಣಿಕೆ ಯಂತ್ರಗಳಿಂದ ವೋಟರ್ ಸ್ಲಿಪ್ ಲೆಕ್ಕ ಹಾಕುವ ಮೂಲಕ ಸಮಸ್ಯೆ ಸರಿಪಡಿಸಿದ್ದಾರೆ.
ಎಲಾನ್ ಮಸ್ಕ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, “ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇವಿಎಂಗಳ ಬಗ್ಗೆ ಇವರಿಗೆ ಕಲಿಸಿಕೊಡುವ ಅಗತ್ಯತೆಯಿದೆ” ಎಂದಿದ್ದಾರೆ.
ಇದನ್ನೂ ಓದಿ : ಇವಿಎಂ ಅನ್‌ಲಾಕ್ ಮಾಡಲು ಮೊಬೈಲ್ ಬಳಸಿದ ಶಿವಸೇನೆ ಸಂಸದನ ಸಂಬಂಧಿ?


