ಭಾರತದಲ್ಲಿ ವೋಟ್ ಬ್ಯಾಂಕ್ ರಾಜಕಾರಣವು ‘ಅಲ್ಪಸಂಖ್ಯಾತರ ತುಷ್ಟೀಕರಣ’ಕ್ಕೆ ಸಂಬಂಧಿಸಿದೆ. ಇದು ರಾಜಕೀಯ ಪಕ್ಷಗಳು ಎಲ್ಲಾ ನಾಗರಿಕರ ಸಮಾನತೆಯ ತತ್ವಗಳನ್ನು ಕಡೆಗಣಿಸುವಂತೆ ಮಾಡುತ್ತದೆ ಎಂದು ಎನ್‌ಸಿಇಆರ್‌ಟಿಯ 11ನೇ ತರಗತಿಯ ಪರಿಷ್ಕೃತ ರಾಜ್ಯಶಾಸ್ತ್ರ ಪಠ್ಯ ಪುಸ್ತಕದಲ್ಲಿ ಹೇಳಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2023-24ನೇ ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಎಂಬ ವಿಭಾಗದಲ್ಲಿ ‘ಅಲ್ಪ ಸಂಖ್ಯಾತರ ತುಷ್ಠೀಕರಣ’ ಎನ್ನುವುದು ಇರಲಿಲ್ಲ. ಪರಿಷ್ಕೃತ ಪಠ್ಯದಲ್ಲಿ ಅದನ್ನು ಸೇರಿಸಲಾಗಿದೆ. ಪರಿಷ್ಕೃತ ಪಠ್ಯವು ‘Criticism of Indian secularism’ಎಂಬ ವಿಭಾಗದಲ್ಲಿ ಒಳಗೊಂಡಿದೆ ಎಂದು ವರದಿ ತಿಳಿಸಿದೆ.
ವೋಟ್ ಬ್ಯಾಂಕ್ ರಾಜಕೀಯವನ್ನು ಸಮರ್ಥಿಸುವ ಉದ್ದೇಶದಿಂದ ಮಾತ್ರ’ ಹಳೆಯ ಆವೃತ್ತಿಗೆ ಪರಿಷ್ಕರಣೆಗಳನ್ನು ಮಾಡಲಾಗಿದೆ. ಹೊಸ ಆವೃತ್ತಿಯು ‘Criticism of Indian secularism’ಎಂಬ ವಿಭಾಗಕ್ಕೆ ಸಂಬಂಧಿಸಿದೆ ಎಂದು ಎನ್‌ಸಿಇಆರ್‌ಟಿ ಹೇಳಿದೆ.
“ಅಲ್ಪಸಂಖ್ಯಾತರ ಮತಗಳನ್ನು ಯಾಚಿಸುವ ಜಾತ್ಯತೀತ ರಾಜಕಾರಣಿಗಳು, ಅವರಿಗೆ ಬೇಕಾದುದನ್ನು ನೀಡಲು ಯಶಸ್ವಿಯಾದರೆ, ಇದು ಜಾತ್ಯತೀತೆಯ ಯಶಸ್ಸು. ಇದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಹಳೆಯ ಮತ್ತು ಹೊಸ ಆವೃತ್ತಿಯ ಎರಡೂ ಪಠ್ಯ ಪುಸ್ತಕಗಳಲ್ಲಿ ಇದೆ ಎಂದು ವರದಿ ತಿಳಿಸಿದೆ.
ಇತರ ಗುಂಪುಗಳ ಹಣ ಮತ್ತು ಹಕ್ಕುಗಳನ್ನು ಬಳಸಿ ಒಂದು ಪ್ರತ್ಯೇಕ ಗುಂಪಿನ ಕಲ್ಯಾಣ ಮಾಡಿದರೆ ಹೇಗೆ? ಇಂತಹ ಸೆಕ್ಯುಲರ್ ರಾಜಕಾರಣಿಗಳಿಂದ ಬಹುಸಂಖ್ಯಾತರ ಹಿತಾಸಕ್ತಿಗೆ ಧಕ್ಕೆಯಾದರೆ? ಆಗ ಹೊಸ ಅನ್ಯಾಯ ಹುಟ್ಟುತ್ತದೆ ಎಂದು ಪರಿಷ್ಕೃತ ಪಠ್ಯದಲ್ಲಿ ಹೇಳಲಾಗಿದೆಯಂತೆ.
“ಸಿದ್ಧಾಂತದಲ್ಲಿ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಯಾವುದೇ ತಪ್ಪಿಲ್ಲದಿದ್ದರೂ, ಅದರ ಅಭ್ಯಾಸವು ಚುನಾವಣಾ ರಾಜಕೀಯವನ್ನು ವಿರೂಪಗೊಳಿಸುತ್ತದೆ ಮತ್ತು ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗೆ ಸಾಮೂಹಿಕವಾಗಿ ಮತ ಚಲಾಯಿಸಲು ಸಾಮಾಜಿಕ ಗುಂಪನ್ನು ಸಜ್ಜುಗೊಳಿಸುತ್ತದೆ” ಎಂದು ಪರಿಷ್ಕತ ಪಠ್ಯ ಪುಸ್ತಕ ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವಿವರಿಸಿದೆ.
“ಅಲ್ಪಸಂಖ್ಯಾತ ಗುಂಪಿನಲ್ಲಿ ವೈವಿಧ್ಯತೆಯ ಹೊರತಾಗಿಯೂ, ವೋಟ್ ಬ್ಯಾಂಕ್ ರಾಜಕೀಯವನ್ನು ಅನುಸರಿಸುವ ಪಕ್ಷ ಅಥವಾ ನಾಯಕ “ಗುಂಪಿನ ಹಿತಾಸಕ್ತಿ ಒಂದೇ ಎಂಬ ನಂಬಿಕೆಯನ್ನು ಕೃತಕವಾಗಿ ನಿರ್ಮಿಸಲು” ಪ್ರಯತ್ನಿಸುತ್ತದೆ. ಸಮಾಜದ ದೀರ್ಘಾವಧಿಯ ಅಭಿವೃದ್ಧಿ ಮತ್ತು ಆಡಳಿತದ ಅಗತ್ಯಗಳಿಗಿಂತ ಅಲ್ಪಾವಧಿಯ ಚುನಾವಣಾ ಲಾಭಗಳಿಗೆ ಆದ್ಯತೆ ನೀಡುತ್ತದೆ” ಎಂದು ಪಠ್ಯ ಪುಸ್ತಕದಲ್ಲಿದೆ ಎಂದಿದೆ.
ಬಿಜೆಪಿ ಮತ್ತು ಸಂಘಪರಿವಾರ ದೇಶದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಓಟ್ ಬ್ಯಾಂಕ್‌ಗಾಗಿ ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ತೊಡಗಿವೆ ಎಂದು ಆಗಾಗ ಹೇಳುತ್ತಿರುತ್ತವೆ. ಆದರೆ, ಕಾಂಗ್ರೆಸ್ ಮುಸ್ಲಿಮರ ಮತಗಳನ್ನು ಪಡೆದಿರುವುದಕ್ಕಿಂತ ಹೆಚ್ಚು ಮತಗಳನ್ನು ಮೇಲ್ಜಾತಿ ಹಿಂದೂಗಳಿಂದ ಬಿಜೆಪಿ ಪಡೆದಿದೆ ಎಂದು ಚುನಾವಣೋತ್ತ ಸಮೀಕ್ಷೆಗಳು ಹೇಳಿವೆ.
2014 ಲೋಕಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ. 38ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಚಲಾಯಿಸಿರುವುದಾಗಿ ಹೇಳಿದ್ದಾರೆ. ಹಿಂದೂಗಳಲ್ಲಿ ಶೇ.53ರಷ್ಟು ಮಂದಿ ಬಿಜೆಪಿಗೆ ಮತ ಚಲಾಯಿಸುರುವುದಾಗಿ ತಿಳಿಸಿದ್ದಾರೆ. 2019ಕ್ಕೆ ಹೋಲಿಸಿದರೆ ಬಿಜೆಪಿಗೆ ಮತ ಹಾಕಿರುವ ಮೇಲ್ಜಾತಿ ಹಿಂದೂಗಳ ಸಂಖ್ಯೆ ಅದೇ ಮಟ್ಟದಲ್ಲಿದೆ. ಆದರೆ ಇತರ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯಗಳ ಮತಗಳು ಕಡಿಮೆಯಾಗಿವೆ.
ಇದನ್ನೂ ಓದಿ : NCERT ಪರಿಷ್ಕೃತ ಪಠ್ಯ ಪುಸ್ತಕದಿಂದ ತಮ್ಮ ಹೆಸರು ಕೈ ಬಿಡಲು ಆಗ್ರಹಿಸಿದ ಯೋಗೇಂದ್ರ ಯಾದವ್, ಸುಹಾಸ್ ಪಾಲ್ಶಿಕರ್


