ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಮಧ್ಯೆ, ಉತ್ತರ ಗುಜರಾತ್‌ನ ಮೆಹ್ಸಾನ ಜಿಲ್ಲೆಯಿಂದ ವೈದ್ಯಕೀಯ ಶಿಕ್ಷಣದ ವಂಚನೆಯ ಕುರಿತ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ.
ಹೋಮಿಯೋಪತಿ ವೈದ್ಯರೊಬ್ಬರು ಎಂಬಿಬಿಎಸ್ ಪದವಿ ಪ್ರವೇಶಕ್ಕೆ 16.32 ಲಕ್ಷ ರೂಪಾಯಿ ಪಾವತಿಸಿದ್ದು, ಯಾವುದೇ ತರಗತಿಗಳಿಗೆ ಹಾಜರಾಗದೆ, ಪರೀಕ್ಷೆ ಎದುರಿಸದೆ ಒಂದು ತಿಂಗಳಲ್ಲಿ ಪದವಿ ಹಾಗೂ ಪ್ರಮಾಣ ಪತ್ರ ಪಡೆದಿದ್ದಾರೆ.
ವರದಿಗಳ ಪ್ರಕಾರ, ಜುಲೈ 2018ರಲ್ಲಿ ಸುರೇಶ್ ಪಟೇಲ್ (41) ಎಂಬ ಹೋಮಿಯೋಪತಿ ವೈದ್ಯ ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಪದವಿ ಪಡೆಯಲು ಅಂತರ್ಜಾಲದಲ್ಲಿ ಶೋಧ ನಡೆಸುವಾಗ, ಆಲ್ ಇಂಡಿಯಾ ಆಲ್ಟರ್ನೇಟಿವ್ ಮೆಡಿಕಲ್ ಕೌನ್ಸಿಲ್ ಎಂಬ ಸಂಸ್ಥೆ ಎಂಬಿಬಿಎಸ್ ಪದವಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುವುದು ಕಂಡು ಬಂದಿದೆ. ಸುರೇಶ್ ಅವರು ಇಂಟರ್‌ನೆಟ್‌ನಲ್ಲಿ ನೀಡಲಾಗಿದ್ದ ಡಾ. ಪ್ರೇಮ್ ಕುಮಾರ್ ರಜಪೂತ್ ಎಂಬವರಿಗೆ ಕರೆ ಮಾಡಿದ್ದಾರೆ. ಎಂಬಿಬಿಎಸ್ ಪದವಿ ಪ್ರವೇಶದ ಬಗ್ಗೆ ವಿಚಾರಿಸಿದ್ದಾರೆ. ಆಗ ಆ ಕಡೆಯಿಂದ ಮಾತನಾಡಿದ ವ್ಯಕ್ತಿ 12ನೇ ತರಗತಿಯ ಅಂಕ ಪಟ್ಟಿಯ ಆಧಾರದಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ದೊರೆಯಲಿದೆ ಎಂಬ ಭರವಸೆ ನೀಡಿದ್ದರು ಎಂದು ಸುರೇಶ್ ಪಟೇಲ್ ಹೇಳಿದ್ದಾರೆ.
ಆರಂಭದಲ್ಲಿ ಪ್ರೇಮ್ ಕುಮಾರ್ ರಜಪೂತ್ ಎನ್ನಲಾದ ವ್ಯಕ್ತಿಯ ಮಾತುಗಳ ಮೇಲೆ ಶಂಕೆ ವ್ಯಕ್ತಪಡಿಸಿ, ಹಿಂಜರಿಕೆ ತೋರಿದ್ದ ಸುರೇಶ್ ಪಟೇಲ್, ಬಳಿಕ ಆತ ನೀಡಿದ ಭರವಸೆಗಳನ್ನು ನಂಬಿ, ಮುಂಗಡವಾಗಿ 50,000 ರೂ. ಪಾವತಿಸಿ ಜಾನ್ಸಿಯ ಭುಂದೇಲ್‌ಖಂಡ್ ವಿವಿಯ ಹೆಸರಿನಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆದಿದ್ದಾರೆ. ಬಳಿಕ ಜುಲೈ 10, 2018ರಿಂದ ಫೆಬ್ರವರಿ 23, 2019ರ ನಡುವೆ ಹಂತ ಹಂತವಾಗಿ ಬರೋಬ್ಬರಿ 16.32 ಲಕ್ಷ ರೂಪಾಯಿ ಪಾವತಿಸಿದ್ದಾರೆ. ತರಗತಿ ಪ್ರಾರಂಭಕ್ಕಾಗಿ ಕಾದಿದ್ದಾರೆ.
ಆದರೆ, ರಜಪೂತ್ ನೀಡಿದ ಭರವಸೆಯಂತೆ ತರಗತಿಗಳು ಆರಂಭಗೊಳ್ಳಲೇ ಇಲ್ಲ. ಮಾರ್ಚ್ 2019ರಲ್ಲಿ ಸುರೇಶ್ ಪಟೇಲ್ ಅವರಿಗೆ ಕೊರಿಯರ್ ಮೂಲಕ ಒಂದು ಪಾರ್ಸೆಲ್ ಬರುತ್ತದೆ. ಅದನ್ನು ತೆರೆದು ನೋಡಿದಾಗ ಎಂಬಿಬಿಎಸ್ ಅಂಕಪಟ್ಟಿಗಳು, ಪದವಿ ಪ್ರಮಾಣ ಪತ್ರ, ತರಬೇತಿ ಪ್ರಮಾಣ ಪತ್ರ ಹಾಗೂ ನೋಂದಣಿ ಪ್ರಮಾಣ ಪತ್ರ ಇತ್ತು. ಎಲ್ಲವೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ)ದ ಸ್ಟ್ಯಾಂಪ್ ಹೊಂದಿತ್ತು.
ಪ್ರಮಾಣ ಪತ್ರಗಳ ಕುರಿತು ಸುರೇಶ್ ಪಟೇಲ್ ಎಂಸಿಐ ಅನ್ನು ವಿಚಾರಿಸಿದಾಗ ಅವುಗಳೆಲ್ಲ ನಕಲಿ ಎಂಬುವುದು ಗೊತ್ತಾಗಿದೆ. ಹಾಗಾಗಿ ಸುರೇಶ್ ಪಟೇಲ್ ದೂರು ದಾಖಲಿಸಿದ್ದರು. 2019ರಲ್ಲಿ ಈ ಪ್ರಕರಣವನ್ನು ಅಹಮದಾಬಾದ್ ಕ್ರೈ ಬ್ರ್ಯಾಂಚ್‌ಗೆ ಹಸ್ತಾಂತರಿಸಲಾಗಿತ್ತು.
ಪೊಲೀಸರಿಗೆ ನೀಡಿದ ದೂರಿನಲ್ಲಿ ಸುರೇಶ್ ಪಟೇಲ್ ಅವರು, “ನಾನು ರಜಪೂತ್ ಜೊತೆ ಸುಮಾರು 25 ಬಾರಿ ಮಾತನಾಡಿದ್ದೇನೆ. ಆತ, ಡಾ. ಶೌಖತ್ ಖಾನ್, ಡಾ. ಆನಂದ್ ಮತ್ತು ಅರುಣ್ ಕುಮಾರ್ ಎಂಬವರು ಎಂಬಿಬಿಎಸ್ ಪೂರ್ತಿಗೊಳಿಸಲು ನನಗೆ ಸಹಾಯ ಮಾಡಲಿದ್ದಾರೆ” ಎಂದಿದ್ದ ಎಂದು ವಿವರಿಸಿದ್ದಾರೆ.
“2019ರಲ್ಲಿ ನಾನು ಮತ್ತು ಮೆಹ್ಸಾನಾ ಪೊಲೀಸ್ ತಂಡ ದೆಹಲಿಗೆ ತೆರಳಿ ಡಾ. ಆನಂದ್ ಕುಮಾರ್‌ಗಾಗಿ ಹುಡುಕಾಟ ನಡೆಸಿದ್ದೇವೆ. ನಾವು ವಿಳಾಸ ಹುಡುಕಿಕೊಂಡು ಹೋದಾಗ ಅಂತವರು ಯಾರೂ ಅಲ್ಲಿ ಇರಲಿಲ್ಲ. ಬಳಿಕ ನಾವು ದೆಹಲಿಯ ಖಾಸಗಿ ಬ್ಯಾಂಕ್ ಒಂದಕ್ಕೆ ತೆರಳಿ ಮಾಹಿತಿ ಕಲೆ ಹಾಕಿದಾಗ, ಅನೇಕ ಮಂದಿ ನನ್ನ ರೀತಿ ಮೋಸ ಹೋಗಿರುವುದು ಗೊತ್ತಾಗಿದೆ” ಎಂದು ಸುರೇಶ್ ಪಟೇಲ್ ಹೇಳಿದ್ದಾರೆ.
ಪ್ರಕರಣದ ತನಿಖೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ದೂರು ದಾಖಲಾಗಿ ಐದು ವರ್ಷ ಕಳೆದರೂ ಇದುವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ಆಗಿಲ್ಲ. ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಿ ಡಿಸೆಂಬರ್ 20, 2023ರಲ್ಲಿ ಸುರೇಶ್ ಪಟೇಲ್ ಅವರು ಮೆಹ್ಸಾನಾ ಎಸ್‌ಪಿ ಕಚೇರಿಗೆ ಮತ್ತೊಂದು ದೂರು ನೀಡಿದ್ದಾರೆ. ಈ ವರ್ಷದ ಜೂನ್ 14ರಂದು ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ‘ಸೆಬಿ’ ಅಧಿಕಾರಿಗಳನ್ನು ಭೇಟಿ ಮಾಡಿದ ಟಿಎಂಸಿ ಸಂಸದರು; ಸ್ಟಾಕ್ ಮಾರ್ಕೆಟ್ ‘ಮ್ಯಾನಿಪುಲಟ್’ ತನಿಖೆಗೆ ಮನವಿ


