ಜುಲೈ 5, 2021ರಂದು ಕಸ್ಟಡಿಯಲ್ಲಿ ಸಾವನ್ನಪ್ಪಿದ ಮಾನವ ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಬಂಧನ, ಸೆರೆವಾಸ ಮತ್ತು ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಭಾರತ ಸರ್ಕಾರವನ್ನು ಒತ್ತಾಯಿಸಿ ಅಮೆರಿಕದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಿರ್ಣಯ ಮಂಡಿಸಲಾಗಿದೆ.
ಮೂವರು ಸಂಸದರಾದ ಜಿಮ್ ಮೆಕ್‌ಗವರ್ನ್, ಆಂಡ್ರೆ ಕಾರ್ಸನ್, ಜುವಾನ್ ವರ್ಗಾಸ್ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದಾರೆ.
“ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 19 ನೇ ವಿಧಿಯಲ್ಲಿ ಬರೆಯಲ್ಪಟ್ಟಂತೆ ಮತ್ತು 1948 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಮಾನವ ಹಕ್ಕು. ಇದು ಭಾರತ ಸಹಿತ ಜಗತ್ತಿನ ಎಲ್ಲಾ ಸರ್ಕಾರಗಳಿಗೂ ಅನ್ವಯವಾಗುತ್ತದೆ” ಎಂದು ನಿರ್ಣಯವು ಸ್ಪಷ್ಟಪಡಿಸಿದೆ.
“ಫಾದರ್ ಸ್ಟ್ಯಾನ್ ಧ್ವನಿಯಿಲ್ಲದವರಿಗೆ ಧ್ವನಿ ನೀಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅವರು ಸ್ಥಳೀಯ ಆದಿವಾಸಿ ಜನರ ಹಕ್ಕುಗಳಿಗಾಗಿ ದಣಿವರಿಯದ ವಕೀಲರಾಗಿದ್ದರು. ಯುವ ಸಮುದಾಯದ ನಾಯಕರಿಗೆ ತರಬೇತಿ ನೀಡಿದವರು ಮತ್ತು ಭಾರತದಲ್ಲಿ ಅನೇಕ ಸಮುದಾಯಗಳಿಗೆ ನ್ಯಾಯಕ್ಕಾಗಿ ಕೆಲಸ ಮಾಡಿದವರು” ಎಂದು ಸಂಸದ ವರ್ಗಾಸ್ ಹೇಳಿದ್ದಾರೆ.
“ಮಾಜಿ ಜೆಸ್ಯೂಟ್ ಆಗಿದ್ದ ಫಾದರ್ ಸ್ಟ್ಯಾನ್ ಅವರು ಕಸ್ಟಡಿಯಲ್ಲಿದ್ದಾಗ ನಿರಂತರ ಕಿರುಕುಳ ಎದುರಿಸಿದ್ದರು. ಅವರಿಗೆ ವೈದ್ಯಕೀಯ ಆರೈಕೆಯನ್ನು ನಿರಾಕರಿಸಿರುವುದರ ಬಗ್ಗೆ ನಾನು ಗಾಬರಿಗೊಂಡಿದ್ದೇನೆ. ಫಾದರ್ ಸ್ಟ್ಯಾನ್ ಒಳ್ಳೆಯ ಕೆಲಸಗಳು ಮತ್ತು ಅವರ ಆಜೀವ ಬದ್ಧತೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಈ ನಿರ್ಣಯವನ್ನು ಮಂಡಿಸುತ್ತಿದ್ದೇನೆ” ಎಂದು ವರ್ಗಾಸ್ ತಿಳಿಸಿದ್ದಾರೆ.
“ಫಾದರ್ ಸ್ಟ್ಯಾನ್ ಎಂದು ಕರೆಯಲ್ಪಡುವ ಫಾದರ್ ಸ್ಟಾನಿಸ್ಲಾಸ್ ಲೂರ್ದುಸ್ವಾಮಿ ಅವರು ಏಪ್ರಿಲ್ 26, 1937 ರಂದು ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ತಿರುಚಿರಾಪಳ್ಳಿ ಜಿಲ್ಲೆಯ ವೀರಗಳೂರು ಎಂಬ ಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಜೆಸ್ಯೂಟ್ ಪಾದ್ರಿಗಳ ಕೆಲಸದಿಂದ ಪ್ರೇರಿತರಾಗಿ 1957ರಲ್ಲಿ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದರು” ಎಂದು ನಿರ್ಣಯವು ಹೇಳಿದೆ.
ನಿರ್ಣಯದ ಪ್ರಕಾರ, ಸಮಕಾಲೀನ ಭಾರತದಲ್ಲಿನ ಅತ್ಯಂತ ಮಹತ್ವದ ಆದಿವಾಸಿ ಚಳುವಳಿಗಳಲ್ಲಿ ಒಂದಾದ ಪಾತಾಳಗಡಿ ಚಳುವಳಿಯಲ್ಲಿ ಫಾದರ್ ಸ್ಟ್ಯಾನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಆದಿವಾಸಿ ಸಮುದಾಯಗಳ ನಡುವೆ ಅವರಿಗೆ ಭಾರತೀಯ ಸಂವಿಧಾನದ ಅಡಿಯಲ್ಲಿ ನೀಡಿರುವ ಹಕ್ಕುಗಳ ಬಗ್ಗೆ ಮಾಹಿತಿಯನ್ನು ಹರಡಲು ಸಹಾಯವಾಯಿತು. ಈ ಚಳುವಳಿಗೆ ಕಲ್ಲಿನ ಕೆತ್ತನೆಯ ಆದಿವಾಸಿ ಸಂಪ್ರದಾಯಗಳನ್ನು (ಉದಾಹರಣೆಗೆ, ಸಮಾಧಿಯ ಕಲ್ಲುಗಳು) ಬಳಸಲಾಗಿತ್ತು.
“ಜಾರ್ಖಂಡ್‌ನಲ್ಲಿ ಆದಿವಾಸಿ ಜನರಿಗೆ ಸ್ವ-ಆಡಳಿತವನ್ನು ಸ್ಥಾಪಿಸಲು ಅವಕಾಶ ನೀಡುವ ಭಾರತೀಯ ಸಂವಿಧಾನದ ಪಂಚಾಯತ್ ವ್ಯವಸ್ಥೆ ಅಥವಾ ಪೆಸಾ ಕಾಯ್ದೆಯ ನಿಬಂಧನೆಗಳ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಫಾದರ್ ಸ್ಟ್ಯಾನ್ ಮಾಡಿದ್ದಾರೆ” ಎಂದು ನಿರ್ಣಯ ಹೇಳಿದೆ.
ಫಾದರ್ ಸ್ಟ್ಯಾನ್ ಸ್ವಾಮಿ ಅವರು ಜುಲೈ 5, 2021 ರಂದು ತಮ್ಮ 84 ನೇ ವಯಸ್ಸಿನಲ್ಲಿ ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಕಸ್ಟಡಿಯಲ್ಲಿರುವಾಗ ನಿಧನರಾದರು. 2018 ರ ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಅವರ ಪಾತ್ರ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಅಕ್ಟೋಬರ್ 8, 2020 ರಂದು ಅವರನ್ನು ಬಂಧಿಸಲಾಗಿತ್ತು. ಪಿತೂರಿ, ದ್ವೇಷಪೂರಿತ ಭಾಷಣ ಮತ್ತು ಭಯೋತ್ಪಾದನೆ ಸೇರಿದಂತೆ ವಿವಿಧ ಅಪರಾಧಗಳ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.
ಇದನ್ನೂ ಓದಿ : ಹತ್ರಾಸ್ ಕಾಲ್ತುಳಿತ ಪ್ರಕರಣ: ‘ಜನಸಂದಣಿಯೇ ಅವಘಡಕ್ಕೆ ಪ್ರಮುಖ ಕಾರಣ..’ ಎಂದು ಎಸ್‌ಐಟಿ ವರದಿ


