ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಹಗರಣದ ಸಂಬಂಧ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಯನ್ನು ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಂತರ ವಶಕ್ಕೆ ಪಡೆದಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹185 ಕೋಟಿಗಳಿಗೂ ಹೆಚ್ಚಿನ ಅವ್ಯವಹಾರದ ಹಿನ್ನೆಲೆಯಲ್ಲಿ, ನಾಗೇಂದ್ರ ಅವರ ಡಾಲರ್ಸ್ ಕಾಲೋನಿಯ ಮನೆ ಸೇರಿದಂತೆ, ಸಂಬಂಧಿಸಿದ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ನಾಲ್ಕು ಕಡೆ ಇಡಿ ದಾಳಿ ನಡೆಸಿತ್ತು.
ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಶಾಸಕ ನಾಗೇಂದ್ರ ಹಾಗೂ ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ್ ಅವರ ನಿನ್ನೆಯ ಸುಧೀರ್ಘ ವಿಚಾರಣೆಯ ಬೆನ್ನಲ್ಲೇ ಇಡಿ ಅಧಿಕಾರಿಗಳು ಇಂದು ಮುಂಜಾನೆಯಿಂದ ಹಠಾತ್ ದಾಳಿ ನಡೆಸಿ ಶಾಸಕ ನಾಗೇಂದ್ರರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದ ಮರುದಿನವೇ ಇಡಿ ಅಧಿಕಾರಿಗಳು ಶಾಸಕರಾದ ನಾಗೇಂದ್ರ, ಬಸನಗೌಡ ದದ್ದಲ್, ಯೂನಿಯನ್ ಬ್ಯಾಂಕ್ ಬ್ರಾಂಚ್ ಹೆಡ್ ಸುಚಿ ಸ್ಮಿತಾ, ಕ್ರೆಡಿಟ್ ಆಫೀಸರ್ ಕೃಷ್ಣಮೂರ್ತಿ, ಬ್ರಾಂಚ್ ಹೆಡ್ ದೀಪಾ ಮುಂತಾದವರ ಮನೆಗಳ ಮೇಲೂ ದಾಳಿ ನಡೆದ್ದು, ಪರಿಶೀಲನೆ ನಡೆಸಲಾಗುತ್ತಿದೆ. ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್ ಮನೆ ಮೇಲೂ ದಾಳಿ ನಡೆಸಲಾಗಿದೆ.
ನಾಗೇಂದ್ರ ಆಪ್ತ ಎನ್ನಲಾದ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ್ ವರ್ಮಾ ಸೇರಿ ಹಲವರ ಮನೆ, ಕಚೇರಿಯಲ್ಲೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರಾಯಚೂರಿನಲ್ಲಿರುವ ನಿಗಮದ ಅಧ್ಯಕ್ಷ ದದ್ದಲ್ ನಿವಾಸದ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನ ಪದ್ಮನಾಭನಗರ ನಿವಾಸ, ಹೈದರಾಬಾದ್‌ನಲ್ಲಿರುವ ಸತ್ಯನಾರಾಯಣ್ ವರ್ಮಾ ನಿವಾಸ ಕಚೇರಿ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಹಾಗೂ ದದ್ದಲ್ ಇಬ್ಬರೂ ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಬುಧವಾರವೂ ಸಹ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ಹಗರಣದ ಸಂಬಂಧ ಶಾಸಕ ಬಸನಗೌಡ ದದ್ದಲ್ ಅವರ ರಾಯಚೂರಿನ ಮನೆ ಕಚೇರಿಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಪ್ರತ್ಯೇಕ ತನಿಖೆಯನ್ನು ಕೈಗೊಂಡಿರುವುದರಿಂದ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ ₹183 ಕೋಟಿ ಅವ್ಯವಹಾರ ನಡೆದಿತ್ತು. ಇದರ ವ್ಯಾಪ್ತಿ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರೆಗೂ ವ್ಯಾಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್ ಡೆತ್‌ನೋಟ್‌ನಲ್ಲಿಯೂ ಸಚಿವರ ಬಗ್ಗೆ ಉಲ್ಲೇಖ ಇದೆ ಎನ್ನಲಾಗಿದೆ.
ಇದನ್ನೂ ಓದಿ; ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ: ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್ ಮನೆ, ಕಚೇರಿ ಮೇಲೆ ಇಡಿ ದಾಳಿ


