ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಾಗೇಂದ್ರ ಅವರ ನಿವಾಸ ಸೇರಿದಂತೆ, ಅವರಿಗೆ ಸೇರಿದ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
ಅದೇ ರೀತಿ ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಬಸನಗೌಡ ದದ್ದಲ್ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.
ಮಂಗಳವಾರ ನಾಗೇಂದ್ರ ಮತ್ತು ದದ್ದಲ್ ಇಬ್ಬರನ್ನೂ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಇಂದು ಮತ್ತೆ ವಿಚಾರಣೆಗೆ ಕರೆದಿದ್ದರು. ಈ ನಡುವೆ ಇಡಿ ದಾಳಿ ನಡೆಸಿರುವ ಮಾಹಿತಿ ದೊರೆತಿದೆ.
ಇದನ್ನೂ ಓದಿ : ‘ಬಿಜೆಪಿ ದಲಿತ ವಿರೋಧಿ ಎಂದು ಹಲವರು ಎಚ್ಚರಿಸಿದ್ದರು..’; ಅಸಮಾಧಾನ ಹೊರಹಾಕಿದ ಜಿಗಜಿಣಗಿ


