ಮುಸ್ಲಿಂ ಧರ್ಮ ಗುರುವೊಬ್ಬರಿಗೆ ಕೆಲ ವ್ಯಕ್ತಿಗಳು ಹೂವಿನ ಹಾರ ಹಾಕಿ ಸನ್ಮಾನ ಮಾಡಿರುವ ವಿಡಿಯೋವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅನೇಕರು ಆ ವಿಡಿಯೋ ಹಂಚಿಕೊಂಡು “ಇಂಗ್ಲೆಂಡ್‌ನ ಬ್ರೈಟನ್ ನಗರದ ನೂತನ ಮೇಯರ್ ಆಗಿ ಮುಸ್ಲಿಂ ಧರ್ಮ ಗುರು ಆಯ್ಕೆಯಾಗಿದ್ದಾರೆ. ಅವರನ್ನು ಸ್ವಾಗತಿಸಿದ ದೃಶ್ಯ ಇದು” ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಈ ಪೋಸ್ಟ್‌ಗಳ ಹಿಂದೆ ‘ಇಸ್ಲಾಮೋಪೋಬಿಕ್’ ಉದ್ದೇಶ ಇರುವುದು ಎದ್ದು ಕಾಣುತ್ತಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಬ್ರೈಟನ್ ನಗರದ ನೂತನ ಮೇಯರ್ ಅಲ್ಲ ಎಂದು ತಿಳಿದು ಬಂದಿದೆ.
ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ವಿಡಿಯೋದಲ್ಲಿರುವ ವ್ಯಕ್ತಿ ಮುಸ್ಲಿಂ ಧಾರ್ಮಿಕ ಪಂಡಿತ ‘ಶೈಖ್ ಸೂಫಿ ಮುಹಮ್ಮದ್ ಅಸ್ಗರ್’ ಅವರು ಎಂದು ಗೊತ್ತಾಗಿದೆ.
ಮೇ 27ರಂದು ಅದೇ ವೈರಲ್ ವಿಡಿಯೋವನ್ನು ‘ಅಸ್ಲಮಿಯಾ ಫೌಂಡೇಶನ್’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾಗಿತ್ತು. “Sheikh visit to friends house #family #mashallah #muslim” ಎಂದು ಶೀರ್ಷಿಕೆ ಕೊಡಲಾಗಿತ್ತು.
ಜನವರಿ 10,2024ರಂದು ‘ಅಸ್ಲಮಿಯಾ ಫೌಂಡೇಶನ್’ ಚಾನೆಲ್‌ನಲ್ಲಿ ‘ಶೈಖ್ ಅಸ್ಗರ್’ ಅವರ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಆ ವಿಡಿಯೋಗೆ “Welcome of Sheikh Sufi Muhammad Asghar to Peterborough U.K” ಎಂದು ಶೀರ್ಷಿಕೆ ಕೊಡಲಾಗಿತ್ತು.

ಮೇ 17,2024ರಂದು ಬಿಬಿಸಿ ಪ್ರಕಟಿಸಿದ ವರದಿಯ ಪ್ರಕಾರ, ಮೊಹಮ್ಮದ್ ಅಸಾದುಝಮಾನ್ ಬ್ರೈಟನ್ ಮತ್ತು ಹೋವ್‌ನಲ್ಲಿ ಚುನಾಯಿತರಾದ ಮೊದಲ ದಕ್ಷಿಣ ಏಷ್ಯಾದ ಮುಸ್ಲಿಂ ಮೇಯರ್ ಆಗಿದ್ದಾರೆ. ಅಸಾದುಝಮಾನ್ ಅವರನ್ನು ಕೌನ್ಸಿಲರ್‌ಗಳು ಸರ್ವಾನುಮತದಿಂದ ಮೇಯರ್ ಆಗಿ ಆಯ್ಕೆ ಮಾಡಿದ್ದಾರೆ. ಅದಕ್ಕೂ ಮುನ್ನ ಬಾಂಗ್ಲಾದೇಶದಲ್ಲಿ ನೀರಾವರಿ ಮತ್ತು ನೀರಿನ ಅಭಿವೃದ್ಧಿಗಾಗಿ ರಾಜ್ಯ ಸಚಿವರೊಂದಿಗೆ ಕೆಲಸ ಮಾಡಿದ್ದರು ಎಂದು ವರದಿ ಹೇಳಿದೆ.

ಒಟ್ಟಿನಲ್ಲಿ, ಮುಸ್ಲಿಂ ಧಾರ್ಮಿಕ ಪಂಡಿತ ಶೈಖ್ ಸೂಫಿ ಮುಹಮ್ಮದ್ ಅಸ್ಗರ್ ಅವರ ವಿಡಿಯೋವನ್ನು ಇಂಗ್ಲೆಂಡ್‌ನ ಬ್ರೈಟನ್ ಮತ್ತು ಹೋವ್ ನಗರಗಳ ಮೇಯರ್ ಆಗಿ ಆಯ್ಕೆಯಾಗಿರುವ ಮೊಹಮ್ಮದ್ ಅಸಾದುಝಮಾನ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗ್ತಿದೆ.
ಇದನ್ನೂ ಓದಿ : FACT CHECK : ಶಾಂಪುವಿನ ವಿಡಂಬನಾತ್ಮಕ ಜಾಹೀರಾತು ಮುಸ್ಲಿಮರನ್ನು ಅಪಹಾಸ್ಯ ಮಾಡಲು ಹಂಚಿಕೊಳ್ಳಲಾಗ್ತಿದೆ


