ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಪಾಕಿಸ್ತಾನ ಹೆಸರಿನ ಒಂದು ಗ್ರಾಮವಿದೆ. ಗ್ರಾಮದ ಜನರಿಗೆ ಗ್ರಾಮದ ಹೆಸರು ಇರಿಸುಮುರಿಸು ಉಂಟಾಗುವಂತೆ ಮಾಡಿದೆ. ಹೀಗಾಗಿ ಗ್ರಾಮದ ಹೆಸರನ್ನು ಬದಲಾಯಿಸಿ ಬಿರ್ಸಾ ಎಂದು ಮರು ನಾಮಕರಣ ಮಾಡುವಂತೆ ಗ್ರಾಮದ ಜನತೆ ಪಟ್ಟು ಹಿಡಿದಿದ್ದಾರೆ.
ಗ್ರಾಮದ ಜನರ ಪ್ರಕಾರ, ಹಳ್ಳಿಯ ಹೆಸರು ಹೇಳಲು ನಾಚಿಕೆಯಾಗುತ್ತದೆ. ಗ್ರಾಮದ ಹೆಸರು ಪಾಕಿಸ್ತಾನ ಎಂದು ಹೇಳಲು ಮುಜುಗರವಾಗುತ್ತದೆ. ಹೀಗಾಗಿ ಗ್ರಾಮದ ಹೆಸರನ್ನು ಬದಲಾಯಿಸಿ, ಬಿರ್ಸಾ ಎಂದು ಮರುನಾಮಕರಣ ಮಾಡಲು ಜಿಲ್ಲಾಧಿಕಾರಿಯವರಿಗೆ ಸಾಮೂಹಿಕವಾಗಿ ಮನವಿ ಪತ್ರ ಬರೆದು ಸಲ್ಲಿಸಿದ್ದೇವೆ. ಆದರೆ ಜಿಲ್ಲಾಧಿಕಾರಿ ರಾಹುಲ್ ಕುಮಾರ್ ಮಾತನಾಡಿ, ಮನವಿ ಪತ್ರ ಕೈಗೆ ಬಂದಿಲ್ಲ. ಗ್ರಾಮಸ್ಥರ ಇಚ್ಛೆಯನುಸಾರ ಗ್ರಾಮದ ಹೆಸರು ಬದಲಾಯಿಸುವುದಾಗಿ ಹೇಳಿದರು.
ಗ್ರಾಮಸ್ಥರು ಹೇಳುವಂತೆ, ಊರಿನ ಹೆಸರು ಪಾಕಿಸ್ತಾನ ಆಗಿರುವುದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ವಯಸ್ಸಿಗೆ ಬಂದ ಗಂಡು-ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತಿಲ್ಲ. ಸಂಬಂಧಗಳು ಬರುತ್ತಿಲ್ಲ. ಆದ್ದರಿಂದ ಊರಿನ ಹೆಸರು ಬದಲಾಯಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ಪೂರ್ಣಿಯಾ ಜಿಲ್ಲೆಯಿಂದ 35 ಕಿ.ಮೀ ದೂರದಲ್ಲಿ ಪಾಕಿಸ್ತಾನ ಗ್ರಾಮವಿದೆ. ಇಲ್ಲಿ ಕೇವಲ ಆದಿವಾಸಿ ಜನರೇ ನೆಲೆಸಿದ್ದು, ಪಾಕಿಸ್ತಾನ ಹೆಸರನ್ನು ಬದಲಾಯಿಸಿ, ಆದಿವಾಸಿಗಳ ದೇವರಾದ ಬಿರ್ಸಾ ಮುಂಡಾ ಹೆಸರು ಮರುನಾಮಕರಣ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.
ಪತ್ರದಲ್ಲಿ ಪಾಕಿಸ್ತಾನ ಭಾರತದ ಮೇಲೆ ಭಯೋತ್ಪಾದಕರನ್ನು ಬಿಟ್ಟು, ರಕ್ತಪಾತಕ್ಕೆ ಕುಮ್ಮಕ್ಕು ನೀಡುತ್ತಿದೆ. ಭಾರತದ ವಿರುದ್ಧ ವಿಷಕಾರುತ್ತಿರುವ ಪಾಕಿಸ್ತಾನ ಹೆಸರನ್ನು ಗ್ರಾಮದಿಂದ ತೆಗೆದು ಹಾಕಿ ಬಿರ್ಸಾ ಮುಂಡಾ ಎಂದು ಪುನರ್ ನಾಮಕರಣ ಮಾಡುವಂತೆ ಉಲ್ಲೇಖಿಸಿದ್ದಾರೆ.
ಶ್ರೀನಗರ ಬಿಡಿಎ ನಂದನ್ ಕುಮಾರ್ ಮನವಿ ಪತ್ರ ಸ್ವೀಕರಿಸಿ, ಗ್ರಾಮದ ಹೆಸರು ಬದಲಾಯಿಸುವಂತೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ ಗ್ರಾಮದ ಹೆಸರು ಬದಲಾಯಿಸುವ ಕಾರ್ಯ ನಮ್ಮ ಕಾರ್ಯಕ್ಷೇತ್ರದಡಿ ಬರುವುದಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ರವಾನಿಸುವುದಾಗಿ ತಿಳಿಸಿದರು.


