ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆಯ ನಡುವೆ, ಅಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ಮುಸ್ಲಿಮರು ದಾಳಿ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಅನೇಕ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇತ್ತೀಚಿನ ವೈರಲ್ ವಿಡಿಯೋವೊಂದರಲ್ಲಿ “ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ, ಮೃತದೇಹವನ್ನು ಪ್ರತಿಮೆಯೊಂದಕ್ಕೆ ನೇತುಹಾಕಿ ಘೋಷಣೆಗಳನ್ನು ಕೂಗುವ ದೃಶ್ಯವಿದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅನೇಕರು “ಬಾಂಗ್ಲಾದೇಶದಲ್ಲಿ ಹಿಂದೂ ವೃದ್ದರೊಬ್ಬರನ್ನು ಹತ್ಯೆ ಮಾಡಿ ಪ್ರತಿಮೆಗೆ ನೇತು ಹಾಕಿದ ಇಸ್ಲಾಮಿಸ್ಟ್‌ಗಳು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ನಾವು ಅನೇಕ ಬಾರಿ ಉಲ್ಲೇಖಿಸಿರುವ ಸುಳ್ಳು ಮತ್ತು ಕೋಮು ವೈಷಮ್ಯದ ಸುದ್ದಿಗಳನ್ನು ಹರಡುವ ಎಕ್ಸ್ ಬಳಕೆದಾರ ಮಿ.ಸಿನ್ಹಾ(MrSinha_) ವಿಡಿಯೋ ಹಂಚಿಕೊಂಡು ಮೇಲಿನಂತೆ ಬರೆದುಕೊಂಡಿದ್ದಾರೆ.

ದೀಪಕ್ ಶರ್ಮಾ (@SonOfBharat7) ಎಂಬ ಮತ್ತೋರ್ವ ಎಕ್ಸ್ ಪ್ರೀಮಿಯಂ ಬಳಕೆದಾರ ಕೂಡ ವಿಡಿಯೋ ಹಂಚಿಕೊಂಡು ಅದೇ ರೀತಿ ಬರೆದುಕೊಂಡಿದ್ದಾರೆ.

ಇವರಿಬ್ಬರೇ ಅಲ್ಲದೆ, ಇನ್ನೂ ಅನೇಕ ಎಕ್ಸ್ ಬಳಕೆದಾರರು ವಿಡಿಯೋ ಹಂಚಿಕೊಂಡು “ಹಿಂದೂ ವ್ಯಕ್ತಿಯನ್ನು ಮುಸ್ಲಿಮರು ಹತ್ಯೆ ಮಾಡಿ ನೇತು ಹಾಕಿದ್ದಾಗಿ” ಆರೋಪಿಸಿದ್ದಾರೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಸತ್ಯಾಸತ್ಯತೆ ತಿಳಿಯಲು ವೈರಲ್ ವಿಡಿಯೋ ಕುರಿತ ಮಾಹಿತಿಯನ್ನು ನಾವು ಹುಡುಕಾಡಿದ್ದೇವೆ. ಈ ವೇಳೆ ಖ್ಯಾತ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಈ ಕುರಿತು ಸುದ್ದಿ ಪ್ರಕಟಿಸಿರುವುದು ಕಂಡು ಬಂದಿದೆ.
ಆಲ್ಟ್ ನ್ಯೂಸ್ ಸುದ್ದಿಯಲ್ಲಿ “ನಾವು ವೈರಲ್ ವಿಡಿಯೋ ಕುರಿತು ಬಾಂಗ್ಲಾದೇಶದ ಪತ್ರಕರ್ತರ ಜೊತೆ ಮಾತನಾಡಿದ್ದೇವೆ. ಅವರು ವಿಡಿಯೋದಲ್ಲಿರುವ ವ್ಯಕ್ತಿ ‘ಶಾಹಿದುಲ್ ಇಸ್ಲಾಂ ಹಿರಾನ್’ ಎಂದು ತಿಳಿಸಿದ್ದಾಗಿ ಹೇಳಲಾಗಿದೆ.

ವರದಿ ಆಧರಿಸಿ ನಾವು ಶಾಹಿದುಲ್ ಇಸ್ಲಾಂ ಕುರಿತು ಮಾಹಿತಿ ಹುಡುಕಿದ್ದೇವೆ. ಈ ವೇಳೆ “75 ವರ್ಷ ವಯಸ್ಸಿನ ಶಾಹಿದುಲ್ ಇಸ್ಲಾಂ ಅವರು ನೈಋತ್ಯ ಬಾಂಗ್ಲಾದೇಶದ ಜೆನೈದಾ ಪ್ರದೇಶದ ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅವರನ್ನು ಮತ್ತು ಅವರ ಚಾಲಕ ಅಖ್ತರ್ ಹುಸೈನ್ ಅನ್ನು ಇರಿದು ಹತ್ಯೆ ಮಾಡಿ ಬಳಿಕ ಸುಟ್ಟು ಹಾಕಲಾಗಿದೆ ಎಂಬ ವರದಿಗಳು ಲಭ್ಯವಾಗಿದೆ.
ಢಾಕಾ ಪೋಸ್ಟ್ ಸುದ್ದಿ ವೆಬ್‌ಸೈಟ್‌ನ ವರದಿಯ ಪ್ರಕಾರ, ಆಗಸ್ಟ್ 5ರಂದು ಪ್ರತಿಭಟನಾಕಾರರು ಶಾಹಿದುಲ್ ಇಸ್ಲಾಂ ಹಿರಾನ್ ಅವರ ಮನೆಗೆ ದಾಳಿ ನಡೆಸಿದ್ದರು. ಈ ವೇಳೆ ಆತ್ಮರಕ್ಷಣೆಗೆ ಹಿರಾನ್ ಅವರು ಜನರ ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಕೆಲವರು ಗಾಯಗೊಂಡಿದ್ದರು. ಬಳಿಕ ಜನರ ಗುಂಪು ಹಿರಾನ್ ಅವರ ಮನೆಗೆ ಬೆಂಕಿ ಹಚ್ಚಿದೆ ಮತ್ತು ಹಿರಾನ್ ಅವರ ಚಾಲಕ ಅಖ್ತರ್ ಅವರನ್ನು ಗಾಯಗೊಳಿಸಿದೆ. ಅಖ್ತರ್ ಅವರನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇನ್ನು ಗುಂಪು ದಾಳಿಯ ವೇಳೆ ಹಿರಾನ್ ಅವರು ಮನೆಯ ಮೂರನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದರು. ಮನೆಗೆ ಬೆಂಕಿ ಹಚ್ಚಿದ್ದರಿಂದ ಅವರು ಅಲ್ಲೇ ಸಜೀವ ದಹನವಾಗಿದ್ದಾರೆ. ಬಳಿಕ ಗುಂಪು ಮನೆಯ ಬಾಗಿಲು ಒಡೆದು ಹಿರಾನ್ ಅವರ ಮೃತದೇಹವನ್ನು ಹೊರತಂದಿದೆ. ಅದನ್ನು ಢಾಕಾ ನಗರ ಹೃದಯ ಭಾಗದ ಪೈರಾ ಚತ್ತರ್ ಎಂಬಲ್ಲಿ ಪ್ರತಿಮೆಗೆ ನೇತುಹಾಕಿ ಘೋಷಣೆಗಳನ್ನು ಕೂಗಿದೆ.
ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಈ ಕುರಿತು ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ಹತ್ಯೆ ಮಾಡಿ ನೇತುಹಾಕಿರುವುದು ಅವಾಮಿ ಲೀಗ್ ಪಕ್ಷದ ಶಾಹಿದುಲ್ ಇಸ್ಲಾಂ ಹಿರಾನ್ ಅವರನ್ನು ಎಂದು ಹೇಳಲಾಗಿದೆ. ವಿಡಿಯೋ ಲಿಂಕ್ ಇಲ್ಲಿದೆ.

ನಮ್ಮ ಪರಿಶೀಲನೆಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ಬಾಂಗ್ಲಾದಲ್ಲಿ ಪ್ರತಿಭಟನಾಕಾರರು ಹತ್ಯೆ ಮಾಡಿ ನೇತು ಹಾಕಿರುವುದು ಅವಾಮಿ ಲೀಗ್ ನಾಯಕ ಶಾಹಿದುಲ್ ಇಸ್ಲಾಂ ಹಿರಾನ್ ಅವರನ್ನೇ ಹೊರತು, ಯಾವುದೇ ಹಿಂದೂ ವ್ಯಕ್ತಿಯನ್ನಲ್ಲ. ಇದೊಂದು ರಾಜಕೀಯ ವೈಷಮ್ಯದ ಕೃತ್ಯವಾಗಿದೆ. ಅಲ್ಲದೆ ಹಿಂದೂ ವ್ಯಕ್ತಿಯನ್ನು ಮುಸ್ಲಿಮರು ಹತ್ಯೆ ಮಾಡಿರುವ ಕೋಮು ಘಟನೆಯಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಪ್ರತಿಪಾದನೆ ಸುಳ್ಳಾಗಿದೆ.
ಇದನ್ನೂ ಓದಿ : FACT CHECK : ಬಾಂಗ್ಲಾದಲ್ಲಿ ಹಿಂದೂ ಕ್ರಿಕೆಟಿಗನ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬುವುದು ಸುಳ್ಳು


