ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗಿ, ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಪಲಾಯನ ಮಾಡಿದ ಬಳಿಕ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ಮುಸ್ಲಿಮರು ದಾಳಿ ನಡೆಸುತ್ತಿದ್ದಾರೆ ಎಂದು ಅನೇಕ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
“ಹಿಂದೂ ಮಹಿಳೆಯರ ಮೇಲೆ ಮುಸ್ಲಿಮರು ಅತ್ಯಾಚಾರ ಎಸಗಿದ್ದಾರೆ. ಹಿಂದೂ ಕ್ರಿಕೆಟಿಗನ ಮನೆಗೆ ಬೆಂಕಿ ಹಚ್ಚಿದ್ದಾರೆ. ಹಿಂದೂ ವೃದ್ದರೊಬ್ಬರನ್ನು ಕೊಂದು ನೇತು ಹಾಕಿದ್ದಾರೆ. ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿದ್ದಾರೆ ಇತ್ಯಾದಿ ವಿಡಿಯೋ, ಫೋಟೋಗಳು ಕಳೆದೆರಡು ದಿನಗಳಿಂದ ವ್ಯಾಪಕವಾಗಿ ವೈರಲ್ ಆಗಿವೆ.
ಇದೀಗ ಹೊಸದಾಗಿ ಯುವತಿಯೊಬ್ಬಳ ಕೈಕಾಲುಗಳನ್ನು ಕಟ್ಟಿ, ಆಕೆಯ ಬಾಯಿಗೆ ಗಮ್‌ಟೇಪ್ ಹಾಕಿರುವ ವಿಡಿಯೋ ಕಾಣಿಸಿಕೊಂಡಿದೆ.
ಬಲಪಂಥೀಯ ಸುದ್ದಿ ಸಂಸ್ಥೆ “ದಿ ಜೈಪುರ್ ಡೈಲಾಗ್ಸ್” ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆ! ಅವರನ್ನು ಅತ್ಯಾಚಾರವೆಸಗಲಾಗಿದೆ ಮತ್ತು ಕೊಲ್ಲಲಾಗಿದೆ. ಹಿಂದೂಗಳನ್ನು ಗುರಿಯಾಗಿಸಿ ಬಾಂಗ್ಲಾದೇಶದಲ್ಲಿ ಹತ್ಯಾಕಾಂಡ ನಡೆಯುತ್ತಿದೆ” ಎಂದು ಬರೆದುಕೊಂಡಿದೆ.

‘ಉತ್ತರ ಕರ್ನಾಟಕ ಲೆಜೆಂಡ್ಸ್‘ ಎಂಬ ಇನ್‌ಸ್ಟಾಗ್ರಾಂ ಪೇಜ್ ಒಂದರಲ್ಲೂ ವಿಡಿಯೋ ಹಂಚಿಕೊಂಡು “ಬಾಂಗ್ಲಾದೇಶದಲ್ಲಿ ಶಾಂತಿ ದೂತರಿಂದ ಹಿಂದೂ ಮಹಿಳೆಯರ ಮೇಲೆ ದಾಳಿ ಮತ್ತು ಹಿಂದೂ ದೇವಾಲಯಗಳನ್ನು ಸುಟ್ಟು ಹಾಕಿದ್ದಾರೆ. All Eyes on Rafa ಎಂದು ಹಾಕಿದವರು ಯಾರೂ ಬಾಂಗ್ಲಾದ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಏಕೆ ಮಾತನಾಡುತ್ತಿಲ್ಲ? “ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಅದು ಬಾಂಗ್ಲಾದೇಶದ ಜಗನ್ನಾಥ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ರತಿಭಟನೆಯೊಂದರ ದೃಶ್ಯ ಎಂದು ಗೊತ್ತಾಗಿದೆ.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಹಾಕಿ ಸರ್ಚ್ ಮಾಡಿದಾಗ ಜುಲೈ 26ರಂದು ‘Jnu Short Stories’ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ “ವಿಡಿಯೋದಲ್ಲಿರುವುದು ಜಗನ್ನಾಥ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿನಿಯಾಗಿದ್ದು, ಆಕೆ ಆವಂತಿಕ ಎಂಬ ಮತ್ತೋರ್ವ ವಿದ್ಯಾರ್ಥಿನಿಯ ಆತ್ಮಹತ್ಯೆ ಖಂಡಿಸಿ ವಿಶಿಷ್ಟವಾಗಿ ಪ್ರತಿಭಟಿಸಿದ ದೃಶ್ಯ ಇದಾಗಿದೆ. ಈಗ ದೇಶದಲ್ಲಿ ವಿದ್ಯಾರ್ಥಿ ಪ್ರತಿಭಟನೆ ನಡೆಯುತ್ತಿರುವುದರಿಂದ, ಈಕೆ ಛಾತ್ರಾ ಲೀಗ್ ನಾಯಕಿ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ”

“ಸುಳ್ಳು ಸುದ್ದಿಯಿಂದ ಆಕೆಗೆ ಬಹಳಷ್ಟು ನೋವಾಗಿದೆ. ಇದು ಆಕೆಗೆ ಆಘಾತಕ್ಕೆ ಕಾರಣವಾಗಬಹುದು. ಈ ಪೋಸ್ಟ್ ಆವಂತಿಕಾಳ ಆತ್ಮಹತ್ಯೆ ಮತ್ತು ಅದರ ಸಂಬಂಧ ವಿದ್ಯಾರ್ಥಿನಿ ನಡೆಸಿದ ಪ್ರತಿಭಟನೆಯ ಬಗ್ಗೆ ಗಮನ ಸೆಳೆಯುತ್ತದೆ. ವದಂತಿಗಳನ್ನು ಹರಡುವುದನ್ನು ನಿಲ್ಲಿಸಲು ಜನರಲ್ಲಿ ಕೋರುತ್ತೇವೆ” ಎಂದು ವಿವರಿಸಲಾಗಿದೆ.
ಈ ಪೋಸ್ಟ್ ಆಧರಿಸಿ ನಾವು ಆವಂತಿಕಾ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆ ಮತ್ತು ಪ್ರತಿಭಟನೆಯ ಬಗ್ಗೆ ಮಾಹಿತಿ ಹುಡುಕಿದ್ದೇವೆ. ಈ ವೇಳೆ ಬೆಂಗಾಳಿ ಸುದ್ದಿ ವೆಬ್‌ಸೈಟ್ ಡೈಲಿ ಇತ್ತೆಫಾಕ್ ಮಾರ್ಚ್ 17ರಂದು ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.
ಆ ವರದಿಯಲ್ಲಿ ” ವಿದ್ಯಾರ್ಥಿನಿ ಫೈರೂಝ್ ಸದಾಫ್ ಆವಂತಿಕಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸಲು ಆಗ್ರಹಿಸಿ ಜಗನ್ನಾಥ ವಿವಿಯ ವಿದ್ಯಾರ್ಥಿಗಳು ಪಂಜಿನ ಮೆರವಣಿಗೆ ನಡೆಸಿದರು. ಮೊಂಬತ್ತಿ ಹೊತ್ತಿಸಿ, ಬೀದಿ ನಾಟಕ ಮಾಡಿ ಪ್ರತಿಭಟಿಸಿದರು” ಎಂದು ಹೇಳಲಾಗಿದೆ.

ಒಟ್ಟಿನಲ್ಲಿ, ವೈರಲ್ ವಿಡಿಯೋ ಬಾಂಗ್ಲಾದೇಶದ ಜಗನ್ನಾಥ ವಿವಿಯ ವಿದ್ಯಾರ್ಥಿನಿಯ ಪ್ರತಿಭಟನೆಯದ್ದೇ ಹೊರತು, ಹಿಂದೂ ಮಹಿಳೆಯರ ಮೇಲಿನ ದಾಳಿಯದ್ದಲ್ಲ. ಜಗನ್ನಾಥ ವಿವಿಯ ಆವಂತಿಕ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ವಿದ್ಯಾರ್ಥಿನಿಯೊಬ್ಬಳು ಕೈ ಕಾಲಿಗೆ ಹಗ್ಗಕಟ್ಟಿ, ಬಾಯಿಗೆ ಗಮ್‌ಟೇಪ್ ಹಾಕಿ ವಿಶಿಷ್ಟವಾಗಿ ಪ್ರತಿಭಟಿಸಿದ್ದಾಳೆ. ಅದನ್ನು ಹಿಂದೂ ಮಹಿಳೆಯರ ಮೇಲೆ ದಾಳಿ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ, ಈ ವಿಡಿಯೋ ಬಾಂಗ್ಲಾದ ಇತ್ತೀಚಿನ ಸರ್ಕಾರದ ವಿರುದ್ದದ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ.
ಇದನ್ನೂ ಓದಿ : FACT CHECK : ಬಾಂಗ್ಲಾದಲ್ಲಿ ಮುಸ್ಲಿಮರು ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಿ ನೇತು ಹಾಕಿದ್ದಾರೆ ಎಂಬುವುದು ಸುಳ್ಳು


