ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಯುವಕರ ಗುಂಪೊಂದು ಹಲ್ಲೆ ನಡೆಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೋ ಹಂಚಿಕೊಂಡಿರುವ ಹಲವರು “ಮುಂಬೈನಲ್ಲಿ ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದಕ್ಕೆ ಮುಸ್ಲಿಮರು ವೃದ್ದನಿಗೆ ಥಳಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಜುಲೈ 29,2024ರಂದು ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಅನು ಅನಿತಾ (@Ani_Sanatani) ಎಂಬ ಬಳಕೆದಾರರು “ಭಾರತ ಮಾತೆಗೆ ಜೈ ಎನ್ನಲಾಗದ ಪರಿಸ್ಥಿತಿ. ಘಟನೆ ಮುಂಬೈನ ಭಿಂಡಿ ಬಜಾರ್‌ನಲ್ಲಿ ನಡೆದಿದೆ. ಇದು ಭಾರತದಲ್ಲಿನ ಜಿಹಾದಿ ಮುಸಲ್ಮಾನರ ಪ್ರದೇಶಗಳಲ್ಲಿ ಭಾರತ್ ಮಾತಾಕಿ ಜೈ ಎನ್ನಲಾಗದ ಪರಿಸ್ಥಿತಿ. ಇದು ಇಸ್ಲಾಮಿಕ್ ದೇಶ ಅಲ್ಲ. ಇದು ಭಾರತ್ ಮಾತಾಕಿ ಜೈ! ಹೇಳಿದ ಭಾರತದ ಒಬ್ಬ ದೇಶ ಭಕ್ತ ಮುದುಕನ ಪರಿಸ್ಥಿತಿ” ಎಂದು ಬರೆದುಕೊಂಡಿದ್ದರು.
*👆ಭಾರತ ಮಾತೆಗೆ ಜೈ ಎನ್ನಲಾಗದ ಪರಿಸ್ಥಿತಿ*😡 ಘಟನೆ ಮುಂಬೈನ ಭಿಂಡಿ ಬಜಾರ್‌ನಲ್ಲಿ ನಡೆದಿದೆ. 😡 ಇದು ಭಾರತದಲ್ಲಿನ ಜಿಹಾದಿ ಮುಸಲ್ಮಾನರ ಪ್ರದೇಶಗಳಲ್ಲಿ *ಭಾರತ್ ಮಾತಾಕಿ ಜೈ* ಎನ್ನಲಾಗದ ಪರಿಸ್ಥಿತಿ…. ಇದು ಇಸ್ಲಾಮಿಕ್ ದೇಶ ಅಲ್ಲ… ಇದು ಭಾರತ್ ಮಾತಾಕಿ ಜೈ! ಹೇಳಿದ ಭಾರತದ ಒಬ್ಬ ದೇಶ ಭಕ್ತ ಮುದುಕನ ಪರಿಸ್ಥಿತಿ. pic.twitter.com/aqrx3KpucJ
— ANU ANITHA (@Ani_Sanatani) July 29, 2024
ಜುಲೈ 31ರಂದು ಅದೇ ಇದೇ ವಿಡಿಯೋವನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ‘ಪ್ರಭಾಕರ್ ಭಟ್’ ಎಂಬವರು ” ಎಚ್ಚೆತ್ತುಕೊಳ್ಳಿ ಭಾರತೀಯರೇ.. ಒಬ್ಬ ರಾಷ್ಟ್ರೀಯವಾದಿ ವೃದ್ಧರು ಭಾರತ ಮಾತೆಗೆ ಜೈ ಎಂದಾಗ ಅವರನ್ನು ಹೊಡೆದು ಬಡಿದು ದೈಹಿಕ ಹಲ್ಲೆ ಮಾಡಿದ ಘಟನೆ ಮುಂಬೈನ ಭಿಂಡಿ ಬಜಾರ್‌ನಲ್ಲಿ ನಡೆದಿದೆ. ಮಹಾರಾಷ್ಟ್ರ ಪೋಲೀಸರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂ ಈ ಘಟನೆಯ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಬೇಕು” ಎಂದು ಬರೆಕೊಂಡಿದ್ದರು.

ಹಾಗಾದರೆ, ಸಾಮಾಜಿಕ ಜಾಲತಾಣ ಬಳಕೆದಾರರು ಮಾಡಿರುವ ಪ್ರತಿಪಾದನೆ ನಿಜಾನಾ? ಎಂದು ನೋಡೋಣ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಅದು ಮುಂಬೈನ ಭಿಂಡಿ ಬಜಾರ್‌ನ ವಿಡಿಯೋ ಅಲ್ಲ. ಅಕ್ಟೋಬರ್ 15, 2019ರಂದು ರಾಜಸ್ಥಾನದ ಬಿಲ್ವಾರ ಜಿಲ್ಲೆಯಲ್ಲಿ ನಡೆದ ಘಟನೆಯದ್ದು ಎಂದು ಗೊತ್ತಾಗಿದೆ. ‘ವೃದ್ದರೊಬ್ಬರು ಬೀದಿಯಲ್ಲಿ ಹೋಗುತ್ತಿದ್ದವರನ್ನು ನಿಂದಿಸಿದ್ದಕ್ಕೆ ಸ್ಥಳೀಯರು ಥಳಿಸಿರುವುದಾಗಿ’ ಮಾಧ್ಯಮಗಳು ವರದಿ ಮಾಡಿವೆ.
ಬಿಲ್ವಾರದ ಆಝಾದ್ ಚೌಕ್ ಪ್ರದೇಶದಲ್ಲಿ ಘಟನೆ ನಡೆದಿದೆ. ಸ್ಥಳೀಯ ವ್ಯಾಪಾರಿಗಳು ವೃದ್ದನಿಗೆ ಥಳಿಸಿದ್ದಾರೆ ಎಂದು ಬಿಲ್ವಾರ ಎಸ್ಪಿ ಹರ್ಷೇಂದ್ರ ಕುಮಾರ್ ಹೇಳಿರುವುದಾಗಿ 2023ರ ಅಕ್ಟೋಬರ್ 12ರಂದು ದಿ ಕ್ವಿಂಟ್ ವರದಿ ಮಾಡಿತ್ತು.
2019ರಲ್ಲಿ ಸುಳ್ಳು ಮಾಹಿತಿಯೊಂದಿಗೆ ವಿಡಿಯೋ ಹರಿದಾಡುತ್ತಿದ್ದಾಗ ಕ್ವಿಂಟ್ ಅದರ ಸತ್ಯಾಸತ್ಯತೆ ಪರಿಶೀಲಿಸಿತ್ತು. ಆ ವೇಳೆ ಎಸ್ಪಿ ಹರ್ಷೇಂದ್ರ ಕುಮಾರ್ ಜೊತೆ ಮಾತನಾಡಿತ್ತು. ಆಗ ಎಸ್ಪಿ ಕೊಟ್ಟ ಪ್ರತಿಕ್ರಿಯೆಯನ್ನೇ 2023ರ ವರದಿಯಲ್ಲೂ ಉಲ್ಲೇಖಿಸಿತ್ತು.
2019ರಲ್ಲಿ ಸುಳ್ಳು ಸಂದೇಶದೊಂದಿಗೆ ಇದೇ ವಿಡಿಯೋ ವೈರಲ್ ಆದಾಗ, 19 ಅಕ್ಟೋಬರ್ 2019ರಂದು ದೆಹಲಿಯ ಮಾಜಿ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ ಅವರು ಫೇಸ್‌ಬುಕ್‌ನಲ್ಲಿ ವಿಡಿಯೋ ಕುರಿತು ಬರೆದುಕೊಂಡಿದ್ದರು. ಅದರಲ್ಲಿ ಈ ಘಟನೆ ರಾಜಸ್ಥಾನದ ಆಝಾದ್ ಚೌಕ್‌ನಲ್ಲಿ ನಡೆದಿದೆ ಎಂದು ಅವರು ಉಲ್ಲೇಖಿಸಿದ್ದರು. 2019ರ ಸೆಪ್ಟೆಂಬರ್ 25ರಂದು ರಾಜಸ್ಥಾನದ ವಿಧಾನಸಭೆ ಚುನಾವಣೆಯ ಮತದಾನ ನಿಗದಿಯಾಗಿತ್ತು. ಅದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ ಸುಳ್ಳು ಸಂದೇಶದೊಂದಿಗೆ ವಿಡಿಯೋ ವೈರಲ್ ಆಗಿತ್ತು.

ವೃದ್ದನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಅಲಿಯಾಸ್ ಸಿಂಧಿ (39) ಹೇಮಂತ್ ನಥಾನಿ (45), ಭಗವಾನ್ ದಾಸ್ (37), ಮಜೂರ್ ಶೇಖ್ (31) ಇರ್ಫಾನ್ (34) ಎಂಬವರ ಮೇಲೆ 20 ಅಕ್ಟೋಬರ್ 2019ರಂದು ಎಫ್‌ಐಅರ್ ಕೂಡ ದಾಖಲಾಗಿತ್ತು.
Hope this report will clarify pic.twitter.com/lSbTRO0gV1
— Manjinder Singh Sirsa (@mssirsa) October 20, 2019
ನಾವು ನಡೆಸಿದ ಪರಿಶೀಲನೆಯಲ್ಲಿ , ವೈರಲ್ ವಿಡಿಯೋದಲ್ಲಿರುವ ಘಟನೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಆಝಾದ್ ಚೌಕ್ ಪ್ರದೇಶದಲ್ಲಿ 2019ರ ಅಕ್ಟೋಬರ್ 15ರಂದು ನಡೆದದ್ದು ಎಂದು ಗೊತ್ತಾಗಿದೆ. ವೃದ್ದರೊಬ್ಬರು ಜನರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಸ್ಥಳೀಯ ವ್ಯಾಪಾರಿಗಳು ಥಳಿಸಿದ್ದಾರೆ. ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯ ವಿಡಿಯೋವನ್ನು ಮುಂಬೈನ ಭಿಂಡಿ ಬಜಾರ್‌ನಲ್ಲಿ ಭಾರತ್ ಮಾತಾಕಿ ಜೈ ಎಂದ ವೃದ್ದನಿಗೆ ಮುಸ್ಲಿಮರು ಥಳಿಸಿದ್ದಾರೆ ಎಂದು ಸುಳ್ಳು ಮತ್ತು ಕೋಮುದ್ವೇಷ ಪೂರಿತ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : FACT CHECK : ಬಾಂಗ್ಲಾದಲ್ಲಿ ಹಿಂದೂ ಶಿಬಿರದ ಮೇಲೆ ಮುಸ್ಲಿಮರಿಂದ ಬಾಂಬ್ ದಾಳಿ ಎಂದು ಸುಳ್ಳು ಸುದ್ದಿ ಹಂಚಿಕೊಳ್ಳಲಾಗಿದೆ


